ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಟ್ರ್ಯಾಕ್ಟರ್‌ಗಳಿಗೆ ಅಳವಡಿಸಲಾದ ಕಾನೂನುಬಾಹಿರ ಡಿಜೆ ಸೌಂಡ್ ಸಿಸ್ಟಮ್‌ಗಳು ಈಗ ಜನರ ಪ್ರಾಣಕ್ಕೆ ಸಂಚಕಾರ ತಂದಿವೆ. ಶಾಲಾ ಮಕ್ಕಳ ಶಿಕ್ಷಣ ಮತ್ತು ರೋಗಿಗಳ ನೆಮ್ಮದಿಗೆ ಭಂಗ ತರುತ್ತಿರುವ ಈ ಅಬ್ಬರದ ವಿರುದ್ಧ ಶ್ರೀನಿವಾಸ್ ಪಾಟೀಲ್ ಈಗ ರಣಕಹಳೆ ಊದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ
ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಲಾಗಿರುವ ಡಿಜೆ ಸೌಂಡ್ ಸ್ಪೀಕರ್‌ಗಳ ಅಬ್ಬರ ಮಿತಿಮೀರಿದೆ. ಇದರಿಂದಾಗಿ ಸಾರ್ವಜನಿಕ ನೆಮ್ಮದಿ ಹದಗೆಡುತ್ತಿದ್ದು, ವಿಶೇಷವಾಗಿ ಶಾಲಾ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಶಬ್ದ ಮಾಲಿನ್ಯದಿಂದಾಗಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿರುವುದಲ್ಲದೆ, ರಸ್ತೆಗಳಲ್ಲಿ ಅತಿಯಾದ ಧ್ವನಿ ಬಳಕೆಯಿಂದ ವಾಹನ ಸವಾರರ ಗಮನ ಚದುರಿ ಅಪಘಾತಗಳು ಸಂಭವಿಸುತ್ತಿವೆ. ಈ ಅಕ್ರಮದ ವಿರುದ್ಧ ಜಂಟಿ ಸಾರಿಗೆ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಧ್ವನಿ ಎತ್ತಿರುವ ಹೋರಾಟಗಾರ ಶ್ರೀನಿವಾಸ್ ಪಾಟೀಲ್, ಜಿಲ್ಲೆಯಲ್ಲಿ ಈಗಾಗಲೇ 800ಕ್ಕೂ ಅಧಿಕ ಜನರು ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಟ್ರ್ಯಾಕ್ಟರ್‌ಗಳ ಈ ಕಿವಿಗಡಚಿಕ್ಕುವ ಶಬ್ದವೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಸರ್ಕಾರಕ್ಕೆ ದ್ರೋಹ ಎಸಗುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳನ್ನು ತಕ್ಷಣವೇ ಅಮಾನತ್ತು ಮಾಡಬೇಕು ಹಾಗೂ ಕಾನೂನುಬಾಹಿರ ಸ್ಪೀಕರ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.
Laxmi News 24×7