Breaking News

ಲಾಲೂ ಪ್ರಸಾದ್ ಯಾದವ್​ಗೆ ಕರೆ ಮಾಡಿದ ಸೋನಿಯಾ ಗಾಂಧಿ; ಕುತೂಹಲಕ್ಕೆ ಕಾರಣವಾದ ಕಾಂಗ್ರೆಸ್​ ಅಧಿನಾಯಕಿ ವರ್ತನೆ

Spread the love

ದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಜೈಲು, ಆಸ್ಪತ್ರೆ ವಾಸದಿಂದ ಬಿಡುಗಡೆಗೊಂಡ ಬಳಿಕ ಇದೇ ಮೊದಲ ಬಾರಿಗೆ ತವರು ರಾಜ್ಯ ಬಿಹಾರಕ್ಕೆ ಆಗಮಿಸಿದ್ದಾರೆ. ಬಿಹಾರದಲ್ಲಿ ಇದೇ ವಾರ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಆದರೇ, ಉಪಚುನಾವಣೆಯಲ್ಲಿ ಕಾಂಗ್ರೆಸ್- ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಡುವೆ ಮೈತ್ರಿಯಾಗಿಲ್ಲ. ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಭಕ್ತ ಚರಣ್ ದಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಮಧ್ಯೆಯೇ ಈಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನೇರವಾಗಿ ಲಾಲೂ ಪ್ರಸಾದ್ ಯಾದವ್ ಜೊತೆಗೆ ದೂರವಾಣಿಯಲ್ಲಿ ಮಾತನಾಡುವ ಮೂಲಕ ಎರಡು ಪಕ್ಷದ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸುವ ಪ್ರಯತ್ನ ಮಾಡಿದ್ದಾರೆ.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕರು ಬಿಹಾರದಲ್ಲಿ ತಮ್ಮ ಬಹುಕಾಲದ ಮಿತ್ರ ಕಾಂಗ್ರೆಸ್ ಪಕ್ಷವನ್ನು ಸತ್ತಂತೆ ಪರಿಗಣಿಸುತ್ತಾರೆ ಎಂಬ ಮಾತುಗಳ ನಡುವೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್‌ಗೆ ಕರೆ ಮಾಡಿದ್ದಾರೆ. ವಿಶೇಷವಾಗಿ ಬಿಹಾರದ ಎರಡು ಕ್ಷೇತ್ರಗಳ ಉಪಚುನಾವಣೆಗಳು ಪಕ್ಷಗಳ ನಡುವೆ ರಾಜಕೀಯ ಕಿತ್ತಾಟಕ್ಕೆ ವೇದಿಕೆಯಾಗುತ್ತಿವೆ. ಇಂಥ ಹೊತ್ತಿನಲ್ಲಿ ಸೋನಿಯಾಗಾಂಧಿ, ಲಾಲೂ ಪ್ರಸಾದ್ ಯಾದವ್ ಜೊತೆಗೆ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮೂರು ವರ್ಷಗಳ ಜೈಲು ಮತ್ತು ಆಸ್ಪತ್ರೆ ವಾಸದ ನಂತರ ಬಿಹಾರ ರಾಜಕೀಯಕ್ಕೆ ಮರಳಿದ ಲಾಲು ಯಾದವ್, ಸೋಮವಾರ ಪ್ರತಿಪಕ್ಷಗಳ ಮೈತ್ರಿಗಾಗಿ ದೈತ್ಯ ಕೆಂಪು ಬಾವುಟವನ್ನು ಹಿಡಿದು, ಕಾಂಗ್ರೆಸ್ ನಾಯಕರನ್ನು ಸಾರ್ವಜನಿಕವಾಗಿ ಟೀಕಿಸಿದ್ದರು. ಕಾಂಗ್ರೆಸ್ ಜೊತೆಗಿನ ಮೈತ್ರಿ ತನ್ನ ಪಕ್ಷಕ್ಕೆ ಏನು ಒಳ್ಳೆಯದನ್ನು ಮಾಡಿದೆ ಎಂದು ಪ್ರಶ್ನಿಸಿದರು.

ಇದೇ ಶನಿವಾರ ನಡೆಯಲಿರುವ ತಾರಾಪುರ ಮತ್ತು ಕುಶೇಶ್ವರ ಆಸ್ಥಾನದ ಎರಡು ಸ್ಥಾನಗಳಿಗೆ ವಿಧಾನಸಭಾ ಉಪಚುನಾವಣೆಯಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸ್ಪರ್ಧಿಸುತ್ತಿವೆ. ಇದು ಮಿತ್ರಪಕ್ಷಗಳ ನಡುವಿನ ಭಿನ್ನಾಭಿಪ್ರಾಯವನ್ನು ಇನ್ನಷ್ಟು ಹೆಚ್ಚಿಸಿದೆ.

ಕಾಂಗ್ರೆಸ್ ಜೊತೆ ಆರ್​ಜೆಡಿ ಮೈತ್ರಿ ಮುಗಿದಿದೆಯೇ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರನ್ನು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕ್ಯಾ ಹೋತಾ ಹೈ ಕಾಂಗ್ರೆಸ್ ಕಾ ಘಟಬಂಧನ್ (ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಏನು ಪ್ರಯೋಜನ)” ಎಂದು ಪ್ರಶ್ನಿಸಿದರು.

ರಾಜ್ಯ ಕಾಂಗ್ರೆಸ್ ನಾಯಕರು ಆರ್‌ಜೆಡಿ ನಾಯಕನ ಮೇಲೆ ಕೋಪಗೊಂಡಿದ್ದರೂ, ಸೋನಿಯಾ ಗಾಂಧಿ ಅವರು ಪಕ್ಷದ ಹಳೆಯ ಮಿತ್ರ ಲಾಲೂ ಪ್ರಸಾದ್ ಯಾದವ್ ಜೊತೆಗೆ ಮಾತನಾಡುವ ಮೂಲಕ ವಿಷಯಗಳನ್ನು ಸುಗಮಗೊಳಿಸಲು ಬಯಸಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಸೋನಿಯಾ ಗಾಂಧಿ ಮತ್ತು ಲಾಲು ಯಾದವ್ ಯಾವಾಗಲೂ ಉತ್ತಮ ಸಂಬಂಧಗಳನ್ನು ಹೊಂದಿದ್ದಾರೆ. 2004 ರಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಇಟಲಿ ಸಂಜಾತ ಪ್ರಧಾನಿ ಆಗಬಾರದು ಎಂಬ ಕೂಗಿನ ಮಧ್ಯೆಯೂ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸೋನಿಯಾ ಗಾಂಧಿಯನ್ನು ಪ್ರಧಾನಿ ಹುದ್ದೆಗೆ ಬಲವಾಗಿ ಬೆಂಬಲಿಸಿದರು.

ಕಳೆದ ವರ್ಷ ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಹೊರತಾಗಿಯೂ ಕಾಂಗ್ರೆಸ್‌ನ ನೀರಸ ಪ್ರದರ್ಶನವು ಪ್ರತಿಪಕ್ಷಗಳ ಮೈತ್ರಿಯನ್ನು ಕೆಡವಲು ಕಾರಣವಾಯಿತು. ಪ್ರತಿಪಕ್ಷದ ಮಹಾಘಟಬಂಧನ್ ಬಹುಮತದ ಕೊರತೆಯಿಂದಾಗಿ, ಬಿಜೆಪಿ ಮತ್ತು ನಿತೀಶ್ ಕುಮಾರ್ ಮತ್ತೆ ಅಧಿಕಾರಕ್ಕೆ ಬಂದರು. ಚುನಾವಣಾ ಫಲಿತಾಂಶದ ಬಳಿಕ ಅನೇಕ ಮಿತ್ರಪಕ್ಷಗಳು ಕಾಂಗ್ರೆಸ್ ಅನ್ನು ದೂಷಿಸಿದವು, ಹೀಗಾಗಿ ತನ್ನ ಪಾಲಿನ 40 ಸ್ಥಾನಗಳಲ್ಲಿ 19 ಸ್ಥಾನಗಳನ್ನು ಮಾತ್ರ ಗೆದ್ದಿದೆ.
ಗಮನಾರ್ಹವಾಗಿ ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥರ ಸಭೆಯ ನಂತರ ಸೋನಿಯಾ ಗಾಂಧಿ ಅವರು ಲಾಲೂ ಯಾದವ್ ಅವರಿಗೆ ಪೋನ್ ಕಾಲ್ ಮಾಡಿ ಮಾತನಾಡಿದ್ದಾರೆ. ನೆನ್ನೆ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ವಿವಿಧ ರಾಜ್ಯಗಳಲ್ಲಿನ ಪಕ್ಷದ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

ಕಾಂಗ್ರೆಸ್ ಸಭೆಯಲ್ಲಿ, ಸೋನಿಯಾ ಗಾಂಧಿ ಅವರು ತಮ್ಮ ಪಕ್ಷದ ನಾಯಕರನ್ನು ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಮೀರಿ ಶಿಸ್ತು ಮತ್ತು ಏಕತೆಯ ಮೇಲೆ ಕೇಂದ್ರೀಕರಿಸಬೇಕೆಂದು ಒತ್ತಾಯಿಸಿದರು. ರಾಜ್ಯ ಮಟ್ಟದ ನಾಯಕರಲ್ಲಿ ಸ್ಪಷ್ಟತೆ ಮತ್ತು ಒಗ್ಗಟ್ಟಿನ ಕೊರತೆ ಇದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

 


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ