ವಿಧಾನಸಭೆ ಚುನಾವಣೆಗೂ ನಾವು ರೆಡಿ ಇದ್ದೇವೆ, ಜಿಲ್ಲಾ ಪಂಚಾಯತಿ-ತಾಲೂಕಾ ಪಂಚಾಯತಿ ಚುನಾವಣೆಗೂ ನಾವು ರೆಡಿ ಇದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಬಾದಾಮಿ ಪ್ರವಾಸದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇದೇ ವೇಳೆ ಬಾದಾಮಿ ತಾಲೂಕಿನ ಮುತ್ತಲಗೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಯಾವಾಗಲೂ ಚುನಾವಣೆ ಎದುರಿಸಲು ಸಿದ್ಧ. ಜಿಲ್ಲಾ, ತಾಲೂಕು ಪಂಚಾಯಿತಿ, ವಿಧಾನಸಭೆ ಚುನಾವಣೆಗೂ ರೆಡಿ ಇದ್ದೀವಿ. ಪಕ್ಷ, ಕಾರ್ಯಕರ್ತರು ಚುನಾವಣೆ ಎದುರಿಸಲು ತಯಾರಾಗಿದ್ದಾರೆ ಎಂದರು.
ಇನ್ನು ಬಾದಾಮಿಯಿಂದ ಸ್ಪರ್ಧಿಸಲು ಬೆಂಬಲಿಗರು ಒತ್ತಾಯಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ಚುನಾವಣೆಗೆ ಇನ್ನೂ ಒಂದು ಕಾಲು ವರ್ಷ ಇದೆ, ನೋಡೋಣ. ನಾನು ಈಗಲೇ ಏನೂ ಹೇಳಲಾಗಲ್ಲ. 5-6 ಕಡೆ ಚುನಾವಣೆಗೆ ನಿಲ್ಲುವಂತೆ ನನ್ನನ್ನ ಕರೆಯುತ್ತಿದ್ದಾರೆ. ಅವರನ್ನೆಲ್ಲ ಕೇಳಿ ಚುನಾವಣೆ ಹತ್ತಿರ ಬಂದಾಗ ಹೇಳುತ್ತೇನೆ ಎಂದರು.
ಬಿಜೆಪಿ ಮತ್ತು ಜೆಡಿಎಸ್‍ನ ಸಾಕಷ್ಟು ಜನ ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ನಿನ್ನೆಯೇ ಹೇಳಿದ್ದೇನೆ. ಆದರೆ ಅವರ ಹೆಸರನ್ನು ನಾನು ಹೇಳಲ್ಲ. ನಮ್ಮ ಪಕ್ಷದ ಸಿದ್ಧಾಂತಗಳ ಮೇಲೆ ನಂಬಿಕೆ ಇರಬೇಕು, ಯಾವುದೇ ಷರತ್ತು ಇಲ್ಲದೇ ಬರಬೇಕು, ಪಕ್ಷದ ನಾಯಕತ್ವ ಒಪ್ಪಿಕೊಂಡು ಬರುವವರಿಗೆ ಸ್ವಾಗತ ಎಂದರು.
ಒಟ್ಟಿನಲ್ಲಿ ಬಿಜೆಪಿ, ಜೆಡಿಎಸ್‍ನ ಹಲವು ನಾಯಕರು ಕಾಂಗ್ರೆಸ್ ಸೇರುವುದು ಖಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಸಧ್ಯ ಎರಡೂ ಪಕ್ಷಗಳ ನಾಯಕರನ್ನು ನಿದ್ದೆಗೆಡಿಸಿದ್ದು ಮಾತ್ರ ಸುಳ್ಳಲ್ಲ.