ಗೋಕಾಕ: ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದರು.
ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಯಶಸ್ವಿ ಆಗಬಾರದು, ಪಾದಯಾತ್ರೆ ಬೆಂಗಳೂರು ತಲುಪಬಾರದು ಎಂಬ ಉದ್ದೇಶ ಸರ್ಕಾರದಾಗಿತ್ತು. ಈಗ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯುವ ಮೂಲಕ ಅದನ್ನು ಬಿಜೆಪಿ ಸರ್ಕಾರವೇ ಸಾಬೀತು ಮಾಡಿದೆ ಎಂದರು.
ಬಿಜೆಪಿ ಸರ್ಕಾರ ಪಾದಯಾತ್ರೆ ಹತ್ತಿಕ್ಕಲು ಪ್ರಯತ್ನಿಸಿದರೂ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಪಾದಯಾತ್ರೆ ಶಾಶ್ವತವಾಗಿ ಉಳಿದಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರು ಕೋವಿಡ್ ಕಡಿಮೆಯಾದ ನಂತರ ಪಾದಯಾತ್ರೆ ಎಲ್ಲಿಂದ ಮೊಟಕುಗೊಂಡಿತ್ತು ಮತ್ತೆ ಅಲ್ಲಿಂದ ಆರಂಭಿಸೋಣ ಎಂದು ತಿಳಿಸಿದ್ದಾರೆ ಎಂದರು.
ಸರ್ಕಾರಕ್ಕೆ ಕಾಂಗ್ರೆಸ್ ಬಗ್ಗೆ ಭಯ ಹುಟ್ಟಿದ್ದು, ಆದಕಾರಣ ಇಂತಹ ಹೋರಾಟಗಳನ್ನು ತಡೆಗಟ್ಟಲು ಕುತಂತ್ರ ರೂಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.