ಸಿಂಧಗಿ ಚುನಾವಣೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ. @Laxminews Gokak
ಗೋಕಾಕ: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಹೀಗಾಗಿ, ಬಿಜೆಪಿಗೆ ಈಗಲೇ ಭಯ ಶುರುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಹಿಲ್ ಗಾರ್ಡನ್ ಗೃಹಕಚೇರಿಯಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭೀತಿಯಿಂದ ಮುಖ್ಯಮಂತ್ರಿಗಳು ಹಾನಗಲ್ ನಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದಾರೆ ಎಂದರು.
ಉಪಚುನಾವಣೆ ಎಂದರೆ ಹಾಗೆ. ಇಡೀ ಸರ್ಕಾರವೇ ಪ್ರಚಾರಕ್ಕೆ ಬರುತ್ತದೆ. ಬಿಜೆಪಿಯವರಿಗೆ ಸೋಲಿನ ಭಯ ಇರುವುದರಿಂದಲೇ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಮಂತ್ರಿಗಳು ಬಂದು ಪ್ರಚಾರ ಮಾಡಿದ್ದಾರೆ. ಬಿಜೆಪಿ ದುಡ್ಡಿನಿಂದಲೇ ಗೆಲ್ಲುವ ಪಕ್ಷ. ಅದೇನು ಹೊಸದಲ್ಲ ಎಂದು ಟೀಕಿಸಿದರು.
ಪಕ್ಷದ ಗೆಲುವು ಖಚಿತ:
ಕಾಂಗ್ರೆಸ್ ಪಕ್ಷ ಕೂಡ ಚುನಾವಣೆಯನ್ನು ಸವಾಲಾಗಿ ಪರಿಗಣಿಸಿದ್ದು, ಗೆಲುವಿಗೆ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು, ಹಿರಿಯ ನಾಯಕರವರೆಗೆ ಎಲ್ಲರೂ ಕೂಡ ಒಗ್ಗಟ್ಟಿನಿಂದ ಪ್ರಚಾರ ಮಾಡಿದ್ದಾರೆ. ಹೀಗಾಗಿ, ನಮ್ಮ ಗೆಲುವು ಖಚಿತ. ಮತದಾರರ ತೀರ್ಮಾನವೇ ಅಂತಿಮವಾಗಿರುವುದರಿಂದ ನ.2 ರವರೆಗೂ ಕಾಯೋಣ ಎಂದು ಹೇಳಿದರು.
ವೈಯಕ್ತಿಕ ಟೀಕೆ ಸರಿಯಲ್ಲ:
ಉಪಚುನಾವಣೆಯಲ್ಲಿ ಆರೋಪ, ಪ್ರತ್ಯಾರೋಪ ಅತಿಯಾಗಿದೆ. ಆರೋಗ್ಯಕರ ಸ್ಪರ್ಧೆ ಇರಬೇಕು. ಆದರೆ, ವೈಯಕ್ತಿಕ ಟೀಕೆ ಸರಿಯಲ್ಲ. ಆ ರೀತಿಯಾಗಬಾರದು ಎಂದು ಪ್ರತಿಕ್ರಿಯಿಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಹಾನಗಲ್ ನ ಅಳಿಯನಾದರೇನು?, ಮಾವನಾದರೇನು? ಅದು ಸಂಬಂಧ ಬರುವುದಿಲ್ಲ. ಹಾನಗಲ್ ಗೆ ಅವರ ಕೊಡುಗೆ ಏನು ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಗೂ ಕಾಂಗ್ರೆಸ್ ನ ಮನೋಹರ್ ತಹಶೀಲ್ದಾರ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಹಾನಗಲ್ ಅಭಿವೃದ್ಧಿಯಾಗಿದೆ ಎಂದು ಹೇಳಿದರು.