ಬೆಳಗಾವಿ: ಸದಾ ಒಂದಿಲ್ಲದೊಂದು ವಿನೂತನವಾಗಿ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯದ ಜನರ ಗಮನ ಸೆಳೆಯುವ ಮಾನವ ಬಂಧುತ್ವ ವೇದಿಕೆ ಸಂಘಟನೆ ಇದೀಗ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ರಾಜ್ಯ ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಿದೆ. ವಿಶೇಷ ಎಂದ್ರೆ ಮತ್ತೊಮ್ಮೆ ಶಾಸಕ ಸತೀಶ ಜಾರಕಿಹೊಳಿ ಅವರೊಂದಿಗೆ ಹೆಲಿಕಾಪ್ಟರ್ ವಿಹಾರಕ್ಕೆ ಅವಕಾಶ ಕಲ್ಪಿಸಿದೆ.
ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಹಾಗೂ ಅವರ ಪಟ್ಟಾಭಿಷೇಕ ನಿರಾಕರಣೆ ಮತ್ತು ಆಡಳಿತ ಪತನವಿಷಯದ ಕುರಿತು ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಹ್ವಾನಿಸಲಾಗಿದೆ.
ಈ ಸ್ಪರ್ಧೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದು, ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಪ್ರಬಂಧ ಹಾಗೂ ಭಾಷಣ ಬರೆಯಬಹುದಾಗಿದೆ. ಸ್ಪರ್ಧೆಗೆ ಯಾವುದೇ ಮಯೋಮಿತಿ ನಿಗದಿ ಪಡಿಸಿಲ್ಲ, ಬದಲಾಗಿ ಯಾರು ಬೇಕಾದವರು ಸ್ಪರ್ಧಿಸಬಹುದಾಗಿದೆ.
ಅತ್ಯುತ್ತಮ ಭಾಷಣದಲ್ಲಿ ವಿಜೇತರಾದ 5 ಐವರಿಗೆ ಹಾಗೂ ಪ್ರಬಂಧ ಸ್ಪರ್ಧೆಯ ಐವರು ಒಟ್ಟು 10 ಜನ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದಲ್ಲದೇ ಶಾಸಕ ಸತೀಶ ಜಾರಕಿಹೊಳಿ ಅವರೊಂದಿಗೆ ಹೆಲಿಕಾಪ್ಟರ್ ರೈಡಿಂಗ್ ಗೆ ಅವಕಾಶ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 31 ಆಗಿದೆ.
ಪ್ರಬಂಧ ಕಳುಹಿಸುವ ವಿಳಾಸ: ಮಾನವ ಬಂಧುತ್ವ ವೇದಿಕೆ ಸಂಘಟನೆ ಕೇಂದ್ರ ಕಚೇರಿ, 1ನೇ ಮಹಡಿ ಶಿವಕೃಪಾ ಬಿಲ್ಡಿಂಗ್, ಕೊಲ್ಹಾಪುರ್ ಸರ್ಕಲ್ ಹತ್ತಿರ ಸಾಯಿ ಸಂಗಮ ಹೋಟೆಲ್ ಹಿಂಭಾಗ ನೆಹರು ನಗರ ಬೆಳಗಾವಿ- 590010
ಪ್ರಬಂಧ ಸ್ಪರ್ಧೆಯ ಷರತ್ತುಗಳು:
ಸಾವಿರ ಪದಗಳ ಮೀರದಂತೆ ಮೂರು ಪುಟದಲ್ಲಿ ಪ್ರಬಂಧ ಬರೆಯಬೇಕಿದೆ. ಕೈ ಬರಹದ ಪ್ರಬಂಧಗಳಿಗೆ ಮಾತ್ರ ಸ್ವೀಕಾರ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು, ವಯಸ್ಸು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಪುಟದಲ್ಲಿ ಲಗತ್ತಿಸುವುದು ಕಡ್ಡಾಯವಾಗಿದೆ.
ಭಾಷಣ ಸ್ಪರ್ಧೆಯ ಷರತ್ತುಗಳು:
ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವವರು 10 ನಿಮಿಷ ಮೀರದಂತೆ ವಿಡಿಯೋ ಮಾಡಿ ಕಳುಹಿಸಿಕೊಡಬೇಕು. ಭಾಷಣ ವಿಡಿಯೋ ಆರಂಭದಲ್ಲಿ ತಮ್ಮ ಹೆಸರು ಹೇಳುವುದು ಕಡ್ಡಾಯವಾಗಿದೆ. ವಿಡಿಯೋ ಜತೆಗೆ ತಮ್ಮ ಹೆಸರು, ಪೂರ್ಣ ವಿಳಾಸವನ್ನು ದೂರವಾಣಿ ಸಂಖ್ಯೆಯನ್ನು 9535372799 ವಾಟ್ಸಪ್ ನಂಬರ್ ಗೆ ಕಳುಹಿಸುವುದು ಕಡ್ಡಾಯವಾಗಿದೆ.
ಮಾನವ ಬಂಧುತ್ವ ವೇದಿಕೆ ಸಂಘಟನೆ ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ ಮಾಡಿ, ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ 10 ವಿಜೇತರಿಗೆ ಹೆಲಿಕಾಪ್ಟರ್ ರೈಡಿಂಗ್ ಮಾಡಿಸುವ ಮೂಲಕ ರಾಜ್ಯದ ಗಮನ ಸೆಳೆದಿತ್ತು.