ಗೋಕಾಕ:
ಲೋಕೋಪಯೋಗಿ ಇಲಾಖೆಯು 2021-22 ನೇ ಸಾಲಿನಲ್ಲಿ 3500 ಕೋಟಿ ರೂ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಅಭಿವೃದ್ಧಿ ಪಡಿಸಲು ಡಿಪಿಆರ್ ಸಿದ್ದಪಡಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದರು.
ನಗರದಲ್ಲಿ ರವಿವಾರದಂದು ಜಲಸಂಪನ್ಮೂಲ ಸಚಿವರೊಂದಿಗೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಂದ ಈಗಾಗಲೇ ಈ ಪ್ರಸ್ತಾವನೆಯ ಅನುಮೋದನೆ ಪಡೆಯಲಾಗಿದ್ದು, ಡಿಪಿಆರ್ ಸಿದ್ದಪಡಿಸುವಂತೆ ಸೂಚಿಸಲಾಗಿದೆ. ಈ ವರ್ಷದಲ್ಲಿ ಒಟ್ಟಾರೆ 25000 ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು, ಅದರಲ್ಲಿ 15510 ಕಿ.ಮೀ ಗ್ರಾಮೀಣ ರಸ್ತೆಗಳನ್ನು ಎಂಡಿಆರ್‍ಗೆ ಹಾಗೂ 9601 ಕಿ.ಮೀ ಎಂಡಿಆರ್ ರಸ್ತೆಗಳನ್ನು ರಾಜ್ಯಹೆದ್ದಾರಿಗೆ ಮೇಲ್ದರ್ಜೆಗೇರಿಸಲಾಗಿದೆ. ಬೆಳಗಾವಿ ಜಿಲ್ಲೆಯ 892 ಕಿ.ಮೀ ಗ್ರಾಮೀಣ ರಸ್ತೆಗಳನ್ನು ಎಂಡಿಆರ್ ಗೆ ಹಾಗೂ 555 ಕಿ.ಮೀ ಎಂಡಿಆರ್ ರಸ್ತೆಗಳನ್ನು ರಾಜ್ಯ ಹೆದ್ದಾರಿಗೆ ಮೇಲ್ದರ್ಜೇರಿಸಲಾಗಿದೆ.
ಕಳೆದ 10ವರ್ಷಗಳಿಂದ ಈ ಕುರಿತು ಬೇಡಿಕೆ ಇತ್ತು. ಶಾಸಕರು ಅಹವಾಲುಗಳನ್ನು ನೀಡಿದ್ದರು. ಮೇಲ್ದರ್ಜೆಗೇರಿಸಿದ ಈ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಯನ್ನು ಏಪ್ರಿಲ್ ನಂತರ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ ಅವರು ಜಿಲ್ಲಾ ಪ್ರಗತಿ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಉಪಸ್ಥಿತರಿದ್ದರು.
Laxmi News 24×7