ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ತಹಶೀಲ್ದಾರ್ ನೆರೆ ಸಂತ್ರಸ್ತರನ್ನು ಏಕಾಏಕಿಯಾಗಿ ವಸತಿ ಗೃಹದಿಂದ ಕಳುಹಿಸಿದ್ದಾರೆ. ರಾಮದುರ್ಗ ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿದ್ದು, ಜನರ ಬದುಕು ಬೀದಿಗೆ ಬಂದಂತಾಗಿದೆ. 2019ರಲ್ಲಿ ನೆರೆಯಿಂದ ರಾಮದುರ್ಗ ತಾಲೂಕಿನ ಹಿರೇಹಂಪಿಹೋಳಿ ಗ್ರಾಮ ಮುಳುಗಡೆಯಾಗಿತ್ತು. ಅಲ್ಲಿದ್ದ ಗ್ರಾಮಸ್ಥರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಆಗ ಸುರೇಬಾನ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ್ದ ವಸತಿ ಗೃಹದಲ್ಲಿ ನೆರೆ ಸಂತ್ರಸ್ತರಿಗೆ ಜಿಲ್ಲಾಡಳಿತ ತಾತ್ಕಾಲಿಕ ವ್ಯವಸ್ಥೆ ಮಾಡಿತ್ತು.
ತಗಡಿನ ಶೆಡ್ ನಿರ್ಮಿಸಿ ಕೊಡುವವರೆಗೆ ವಸತಿ ಗೃಹದಲ್ಲಿರಿ ಎಂದು ತಾಲೂಕು ಅಧಿಕಾರಿಗಳು ಗ್ರಾಮದ ಜನರಿಗೆ ಹೇಳಿದ್ದರು. ಎರಡು ವರ್ಷ ಕಳೆದರೂ ಅಧಿಕಾರಿಗಳು ಶೆಡ್ ನಿರ್ಮಿಸಿ ಕೊಟ್ಟಿಲ್ಲ. ಆದರೆ ಇದೀಗ ಏಕಾಏಕಿಯಾಗಿ ನೆರೆ ಸಂತ್ರಸ್ತರನ್ನು ಹೊರಗೆ ಕಳುಹಿಸಿದ ತಹಶೀಲ್ದಾರ್ ಮಲ್ಲಿಕಾರ್ಜುನ ವಸತಿ ಗೃಹವನ್ನು ಖಾಲಿ ಮಾಡಿಸಿದ್ದಾರೆ.
ಮನೆಗಳಲ್ಲಿದ್ದ ಸಾಮಗ್ರಿಗಳನ್ನು ಸಿಬ್ಬಂದಿ ಹೊರಗೆ ಎಸೆದಿದ್ದಾರೆ. ದಿಕ್ಕು ತೋಚದೆ ನೆರೆ ಸಂತ್ರಸ್ತ ಕುಟುಂಬಗಳು ನಿನ್ನೆಯಿಂದ (ಜುಲೈ 16) ರಸ್ತೆಯಲ್ಲೇ ಕುಳಿತಿವೆ. ಅನ್ನ ನೀರಿಲ್ಲದೆ ಮಕ್ಕಳು, ವಯಸ್ಸಾದವರು ಸೇರಿದಂತೆ 10 ಕುಟುಂಬಗಳು ಪರದಾಡುತ್ತಿವೆ. ಸುರಿಯುವ ಮಳೆಯಲ್ಲೇ ಸಾಮಗ್ರಿ ಜತೆ ಬೀದಿಯಲ್ಲಿರುವ ಜನ, ನಮಗೆ ಮನೆ ನೀಡಿ ಇಲ್ಲವೇ, ತಗಡಿನ ಶೆಡ್ ನಿರ್ಮಿಸಿ ಕೊಡಿ ಅಂತ ಪಟ್ಟು ಹಿಡಿದಿದ್ದಾರೆ.