ನವದೆಹಲಿ : ಹತ್ರಾಸ್ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಜೊತೆಗೂಡಿ ಸಂತ್ರಸ್ತೆ ಕುಟುಂಬ ಸದಸ್ಯರನ್ನು ಭೇಟಿಯಾಗಲು ದೆಹಲಿಯಿಂದ ಹೊರಟಿದ್ದರು. ಆದರೆ ಗ್ರೇಟರ್ ನೊಯ್ಡಾ ಬಳಿ ಅವರ ತಂಡವನ್ನು ಪೊಲೀಸರು ತಡೆದಿದ್ದಾರೆ. ಹೀಗಿರುವಾಗ ಕೇವಲ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಮಾತ್ರ ಹತ್ರಾಸ್‌ಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ದೆಹಲಿ ನೊಯ್ಡಾ ಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಆದರೀಗ ಹತ್ರಾಸ್‌ಗೆ ಪ್ರಯಾಣ ಬೆಳೆಸಿದ್ದ ರಾಹುಲ್ ಗಾಂಧಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ವರದಿಗಳು ಸದ್ದು ಮಾಡಿವೆ.
ರಾಹುಲ್ ಗಾಂಧಿ ಕಾಲ್ನಡಿಗೆಯಲ್ಲಿ ತೆರಳುವ ವೇಳೆ ಪೊಲೀಸರು ನಿಮಗೆ ಮುಂದೆ ಹೋಗಲು ಅವಕಾಶ ನೀಡುವುದಿಲ್ಲ, ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದಿದ್ದಾರೆ.
ಹೀಗಿರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾನು ಏಕಾಂಗಿಯಾಗೆ ಹತ್ರಾಸ್‌ಗೆ ತೆರಳುತ್ತೇನೆ ಎಂದಿದ್ದಾರೆ. ಅಷ್ಟರಲ್ಲಿ ಪೊಲೀಸರು ನಿಮ್ಮನ್ನು ಸೆಕ್ಷನ್ 188ರಡಿ ಬಂಧಿಸುತ್ತಿರುವುದಾಗಿ ಹೇಳಿದ್ದಾರೆ. ಸೆಕ್ಷನ್ 188 ರಡಿ ನೀವು ಬೆಂಬಲಿಗರೊಂದಿಗೆ ತೆರಳಲು ಸಾಧ್ಯವಿಲ್ಲ ಎಂದಿದ್ದಾರೆ. ಪೊಲೀಸರ ಈ ಮಾತಿಗೆ ಸತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿಯಾಗುವ ಅವಕಾಶ ನಮಗ್ಯಾಕೆ ಇಲ್ಲ? ಎಂದು ಪ್ರಶ್ನಿಸಿದ್ದಾರೆ.
ಇನ್ನು ರಾಹುಲ್ ಗಾಂಧಿಯನ್ನು ಬಂಧಿಸುವುದಕ್ಕೂ ಬಾರೀ ನೂಕು ನುಗ್ಗಲು ಸಂಭವಿಸಿದ್ದು, ಇದನ್ನು ತಡೆಯಲು ಪೊಲೀಸರು ಲಾಠಿ ಚಾರ್ ನಡೆಸಿದ್ದಾರೆಂದೂ ವರದಿಗಳು ಹೇಳಿವೆ. ಅಲ್ಲದೇ ಬಂಧಿಸಿ ಕರೆದೊಯ್ಯುವಾಗ ಹುಲ್ ಗಾಂಧಿ ರಸ್ತೆಗೆ ಬಿದ್ದಿದ್ದಾರೆಂದೂ ಹೇಳಲಾಗಿದೆ.
ಇನ್ನು ಹತ್ರಾಸ್‌ಗೆ ಪ್ರಯಾಣಿಸುವುದಕ್ಕೂ ಮೊದು ಪ್ರಿಯಾಂಕಾ ಗಾಂಧಿ ಟ್ವೀಟ್ ಮೂಲಕ ಯೋಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹತ್ರಾಸ್‌ನಲ್ಲಿ ಅನ್ಯಾಯವಾಗುತ್ತಿದೆ. ಸಂತ್ರಸ್ತೆಯ ಕುಟುಂಬ ಸದಸ್ಯರೂ ತನಿಖೆಯಿಂದ ಸಮಾಧಾನಗೊಂಡಿಲ್ಲ. ಅಲ್ಲದೇ ಈ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿರುವ ಆರೋಪವನ್ನೂ ಮಾಡಿದ್ದಾರೆ.