Breaking News

ವಿಶೇಷ ಚೇತನರಿಗೆ ವಿಶೇಷ ಯೋಜನೆ ಪ್ರಸ್ತಾವನೆ ಸಲ್ಲಿಕೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love

ಬೆಳಗಾವಿ: ಮುಂಬರುವ ಬಜೆಟ್‌ನಲ್ಲಿ ವಿಶೇಷ ಚೇತನರಿಗೆ ವಿಶೇಷ ಯೋಜನೆಗಳನ್ನು ನೀಡುವ ಕುರಿತಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ವಿಕಲಚೇತನರ ದಿನಾಚರಣೆ’ 2025ರ ಪ್ರಯುಕ್ತ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ 2025-26 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸರ್ಕಾರ ಸಮಾಜದ ಭಾಗವಾಗಿ ವಿಕಲಚೇತನರನ್ನು ತೆಗೆದುಕೊಂಡು ಹೋಗಲಿದೆ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ, ಸ್ವಾವಲಂಬಿ ಹಾಗೂ ಸ್ವಚ್ಛವಾದ ಜೀವನ ಸಾಗಿಸುವಂತಾಗಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ, ವಿಶೇಷ ಚೇತನರ ಸಬಲೀಕರಣ ಇಲಾಖೆಯು ಜನರ ಸೇವೆ ಮಾಡುವ ಇಲಾಖೆ, ರಾಜ್ಯದಲ್ಲಿ 13 ಲಕ್ಷ ವಿಕಲಚೇತನರಿದ್ದಾರೆ. ಈ ಬಜೆಟ್‌ನಲ್ಲಿ ಎಲ್ಲ ವಿಶೇಷ ಚೇತನರಿಗೆ ವಿಶೇಷ ಯೋಜನೆಗೆ ಪ್ರಸ್ತಾವ‌ನೆ ಸಲ್ಲಿಸಲಾಗಿದೆ. ಅವು ಜಾರಿಯಾಗುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.

ದೇವರು ನಮಗೆ ಎಲ್ಲ ಕೊಟ್ಟಿದ್ದಾನೆ, ಆದರೂ ನಾವು ಕೊರಗುತ್ತೇವೆ. ನಿಮ್ಮನ್ನು ನೋಡಿದರೆ ಚೈತನ್ಯ, ಪ್ರೇರಣೆ ಸಿಗುತ್ತದೆ. ಹಲವೆಡೆ ವಿಶೇಷ ಚೇತನ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ನಿಸ್ವಾರ್ಥ, ಪ್ರೀತಿಯಿಂದ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ತಾಯಿಗಿಂತ ಜಾಸ್ತಿ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ಅಂತವರಿಗೆ ಬಹಳ ಕಡಿಮೆ ಸಂಬಳವಿದೆ. ಅದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ವಿಶೇಷ ಚೇತನ ಮಕ್ಕಳ ಶಾಲೆಯ ಶಿಕ್ಷಕರ ವೇತನವನ್ನು ಶೇಕಡ 40 ರಷ್ಟು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೇವೆಗೆ ಗೌರವ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದರು.

ವಿಕಲಚೇತನರು ಸಾಕಷ್ಟು ಸಾಧನೆ ಮಾಡಿದ್ದಾರೆ, ಪ್ರಶಸ್ತಿಯನ್ನು ತೆಗೆದುಕೊಂಡಿದ್ದಾರೆ. ವಿಶೇಷ ಚೇತನರು ದೇವರು ಕೊಟ್ಟ ಜೀವನ ಕಷ್ಟ ಎನ್ನದೆ ಜೀವಿಸುತ್ತಿದ್ದಾರೆ. ಅವರಿಗೆ ಈಗಿರುವ ಯೋಜನೆಗಳು ಸಾಲುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಸಿಗಬೇಕು, ಶೇಕಡ 5 ಉದ್ಯೋಗ ಮೀಸಲಾತಿ ಕಡ್ಡಾಯವಾಗಿ ಜಾರಿ ಆಗಲೇಬೇಕು. ಪ್ರತಿ ಯೋಜನೆಯಲ್ಲಿ 5% ಮೀಸಲಾತಿ ಇದ್ದರೂ ಯಾರೂ ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಅಂಧರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡದವರು ವಿಶ್ವಕಪ್‌ ಗೆದ್ದಿದ್ದಾರೆ. ವೈಯಕ್ತಿಯವಾಗಿ ಅವರನ್ನು ಕರೆದು ಅಭಿನಂದನೆ ಸಲ್ಲಿಸಿದೆ. ವಿಕಲಚೇತನರಲ್ಲಿರುವ ಅದ್ಭುತ ಪ್ರತಿಭೆ ಮತ್ತು ಆತ್ಮವಿಶ್ವಾಸಕ್ಕೆ ವೇದಿಕೆ ಕಲ್ಪಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ. ಅವರ ಉತ್ಸಾಹ ನಮಗೆಲ್ಲರಿಗೂ ಸ್ಫೂರ್ತಿದಾಯಕ ಎಂದರು.

* ವಿಕಲಚೇತನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸಚಿವರು
ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು, ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಬಳಿಕ ಮಕ್ಕಳ ಜೊತೆ ಕೆಲಕಾಲ ಕಳೆದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಬಿ‌. ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಚೇತನಕುಮಾರ್, ಜಿಲ್ಲಾ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ, ಎ.ಪಿ.ಎಚ್ ಸಂಸ್ಥೆಯ ಅಧ್ಯಕ್ಷರಾದ ವಾಮನ ಕಟ್ಟಿ, ಸಚಿವರ ಮಾಧ್ಯಮ ಸಲಹೆಗಾರರಾದ ಎಂ.ಕೆ.ಹೆಗಡೆ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ನಾಮದೇವ್ ಬಿಲ್ಕರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ, ಜಯಶ್ರೀ ಮಾಳಗಿ, ಎಲ್ಲ ಸಂಘ ಸಂಸ್ಥೆಗಳ ಮುಖ್ಯಸ್ಥರು, ವಿಶೇಷ ಚೇತನ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮರಾಠಾ ಅಭಿವೃದ್ಧಿ ನಿಗಮಕ್ಕೆ ಸಾವಿರ ಕೋಟಿ ರೂ.ಅನುದಾನ ನೀಡಿ: ಕಿರಣ್ ಜಾಧವ್ ಆಗ್ರಹ

Spread the loveಬೆಳಗಾವಿ : ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮರಾಠಾ ಸಮಯದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ