ದಾವಣಗೆರೆ: ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ತಂದೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್, ತಾಯಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸಾಥ್ ನೀಡಿದ್ದಾರೆ.
ಬೆಳಗ್ಗೆ 8:30ಕ್ಕೆ ನಗರ ದೇವತೆ ದುಗಾರ್ಂಬಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಬಳಿಕ ದಾವಣಗೆರೆಗೆ ಒಂದೇ ಹೆಲಿಕಾಪ್ಟರ್ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಬಂದಿಳಿದು ಜೊತೆಯಾದರು. ಬಳಿಕ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಾಯಿತು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಅ ಜಾತಿ ಈ ಜಾತಿ ಅಂತ ನೋಡಿಲ್ಲ. ಎಲ್ಲರನ್ನೂ ಒಳಗೊಂಡಿರುವ ಪಕ್ಷ ಎಂದರೆ ಕಾಂಗ್ರೆಸ್ ಪಕ್ಷ. ನುಡಿದಂತೆ ನಡೆದ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಐದು ಗ್ಯಾರೆಂಟಿ ಯೋಜನೆಗಳ ಜಾರಿಯಲ್ಲಿ ರಾಜ್ಯ ಮೊದಲನೇ ಸ್ಥಾನ ಪಡೆದಿದೆ ಎಂದರು.
ಕಾಂಗ್ರೆಸ್ ಪಕ್ಷದ ನೀತಿ ಎಂದರೆ, ಯಾರು ಶಾಸಕರು ಮೃತರಾಗುತ್ತಾರೋ ಅವರ ಕುಟುಂಬಕ್ಕೆ ಟಿಕೆಟ್ ಕೊಡುತ್ತೇವೆ. ಬಾಗಲಕೋಟೆಯಲ್ಲಿ ಕೂಡ ಮೇಟಿಯವರ ಚಿಕ್ಕ ಮಗನಿಗೆ ನೀಡಲಾಗಿದೆ. ಕಳೆದ ಮೂರು ಬೈ ಎಲೆಕ್ಷನ್ನಲ್ಲಿ ಬಹು ಅಂತರದಲ್ಲಿ ಗೆದ್ದಿದ್ದೇವೆ. ಜನರು ನಮ್ಮ ಮೇಲೆ ವಿಶ್ವಾಸವನ್ನು ಹೊಂದಿದ್ದಾರೆ. ಈ ಚುನಾವಣೆ ಕೂಡ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಕುಟುಂಬ ರಾಜಕಾರಣವನ್ನು ಬೆಂಬಲಿಸೋದಿಲ್ಲ. ಯಾವ ಅಭ್ಯರ್ಥಿ ಗೆಲ್ಲುತ್ತಾರೋ ಅವರನ್ನು ನಿಲ್ಲಿಸುತ್ತೇವೆ. ಜಮೀರ್ ನಮ್ಮ ಜೊತೆ ಬರ್ತಾರೆ, ಬಂಡಾಯ ಶಮನ ಮಾಡುತ್ತೇವೆ ಎಂದರು.
ಡಿ.ಕೆ ಶಿವಕುಮಾರ್ ಮಾತನಾಡಿ, ನಾವೆಲ್ಲ ಸಮರ್ಥ್ ಜೊತೆ ಸೇರಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವುದನ್ನು ಬಿಟ್ಟು ಇಲ್ಲೇ ಜನಸೇವೆಗೆ ನಿಂತಿದ್ದಾರೆ. ನಾವು ಕೆಲ ಲೆಕ್ಕಾಚಾರವನ್ನು ಹಾಕಿಕೊಂಡು ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಅಲ್ಪಸಂಖ್ಯಾತರಿಗೆ ಮೂರು ಬಾರಿ ಎಂಎಲ್ಸಿ ಮಾಡಿದ್ದೇವೆ. ಮುಂದೆ ಕೂಡ ಹಲವು ಅವಕಾಶಗಳು ಇವೆ. ಅವುಗಳಲ್ಲಿ ಸ್ಥಾನಮಾನ ನೀಡುತ್ತೇವೆ ಎಂದರು.
ಬಿಜೆಪಿಯ ಕಾರ್ಯಕರ್ತರು ಕೂಡ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದಾವಣಗೆರೆಗೆ ಮೊದಲಿನಿಂದ ಬರ್ತಾ ಇದೀವಿ. ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಅನುದಾನ ನೀಡಲಾಗಿದೆ. ದಾವಣಗೆರೆ ಎಜುಕೇಶನ್ ಹಬ್ ಆಗಿ ಮಾರ್ಪಾಡು ಆಗಿದೆ. ಅದನ್ನೆಲ್ಲ ಮಾಡಿದ್ದು ಶಾಮನೂರು ಶಿವಶಂಕರಪ್ಪ ಕುಟುಂಬ ಎಂದರು.
ಈಗಾಗಲೇ ಸರ್ವೇ ಮಾಡಿಸಿದ್ದೇವೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ. ರಾಜಕೀಯದಲ್ಲಿ ಟಿಕೆಟ್ ಕೇಳುವ ಹಕ್ಕು ಇದೆ. ಆದರೆ ಇರೋದು ಒಂದು ಸೀಟ್ ಮಾತ್ರ. ಶಾಮನೂರು ಅವರ ಪಟ್ಟ ಶಿಷ್ಯ ಕೂಡ ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದರು.
Laxmi News 24×7