ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ಪ್ರಸ್ತುತಪಡಿಸುತ್ತಿರುವ ಬಜೆಟ್ 2026-27 ಬಗ್ಗೆ ನಿರೀಕ್ಷೆಗಳು ಹಲವಿವೆ. ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಹೂಡಿಕೆದಾರರು ಈ ಬಜೆಟ್ನಿಂದ ಏನು ನಿರೀಕ್ಷಿಸುತ್ತಾರೆ? ಆರ್ಥಿಕ ಬೆಳವಣಿಗೆಗೆ ನೀರೆರೆದು ಪೋಷಿಸಲು ಸರ್ಕಾರ ಯಾವ ಪ್ಲಾನ್ ಮಾಡಿದೆ? ವಿತ್ತೀಯ ಶಿಸ್ತು ಕಾಯ್ದುಕೊಳ್ಳುತ್ತಲೇ ಬಂಡವಾಳ ವೆಚ್ಚ ಹೆಚ್ಚಿಸಲು ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದು ಹೂಡಿಕೆದಾರರಿಗೆ ಇರುವ ಕುತೂಹಲ ಮತ್ತು ನಿರೀಕ್ಷೆ.
ಕಳೆದ ಬಜೆಟ್ನಲ್ಲಿ ಸರ್ಕಾರವು ಬಂಡವಾಳ ವೆಚ್ಚಕ್ಕಿಂತ ಅನುಭೋಗಕ್ಕೆ ಪ್ರಾಶಸ್ತ್ಯ ಕೊಟ್ಟಂತಿತ್ತು. ಆದಾಯ ತೆರಿಗೆ ಮತ್ತು ಜಿಎಸ್ಟಿ ದರಗಳನ್ನು ಇಳಿಸುವ ಮೂಲಕ ಅನುಭೋಗ ಹೆಚ್ಚಿಸಲು ಕ್ರಮ ತೆಗೆದುಕೊಂಡಿತ್ತು. ಅದರ ಫಲವೆಂಬಂತೆ ಗ್ರಾಮೀಣ ಪ್ರದೇಶಗಳಲ್ಲಿ ಅನುಭೋಗ ಹೆಚ್ಚಿದೆ. ಬ್ರೋಕರೇಜ್ ಸಂಸ್ಥೆಯಾದ ಜೆಎಂ ಫೈನಾನ್ಷಿಯಲ್ ಈ ಅಂಶವನ್ನು ಗಮನಿಸಿದೆ. ಹಾಗೆಯೇ, ನಗರ ಭಾಗಗಳಲ್ಲಿ ಅನುಭೋಗ ದುರ್ಬಲವಾಗಿರುವ ಸಂಗತಿಯನ್ನೂ ಅದು ಎತ್ತಿ ತೋರಿಸಿದೆ.
ನಗರ ಭಾಗದಲ್ಲಿ ಅನುಭೋಗ ಹೆಚ್ಚುವುದು ಬಹಳ ಮುಖ್ಯ. ಇಲ್ಲಿ ಅನುಭೋಗ ಆರಕ್ಕೇರದ, ಮೂರಕ್ಕಿಳಿಯದ ಸ್ಥಿತಿಯಲ್ಲಿರುವುದರಿಂದ ಉತ್ಪಾದಕರು ತಮ್ಮ ಘಟಕ ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯೂ ಏರಿಳಿತ ಆಗುತ್ತದೆ. ಆರ್ಬಿಐ ದತ್ತಾಂಶದ ಪ್ರಕಾರ ಭಾರತದ ಉತ್ಪಾದಕ ಸಂಸ್ಥೆಗಳಲ್ಲಿ ಈಗಿರುವ ಉತ್ಪಾದನಾ ಸಾಮರ್ಥ್ಯದಲ್ಲಿ ಶೇ. 75ಕ್ಕಿಂತ ಕಡಿಮೆ ಬಳಕೆ ಆಗುತ್ತಿದೆ.
ಆರ್ಬಿಐನ ಈ ಡಾಟಾವನ್ನು ಉಲ್ಲೇಖಿಸಿರುವ ಜೆಎಂ ಫೈನಾನ್ಷಿಯಲ್, ಈ ಬಾರಿಯ ಬಜೆಟ್ನಲ್ಲಿ ಸರ್ಕಾರವು ಅನುಭೋಗ ಹಾಗೂ ಬಂಡವಾಳ ವೆಚ್ಚದಲ್ಲಿ ಸಮತೋಲನ ತರಲು ಯತ್ನಿಸಬಹುದು ಎಂದು ಅಪೇಕ್ಷಿಸಿದೆ.
ರೆವಿನ್ಯೂ ಎಕ್ಸ್ಪೆಂಡಿಚರ್ ಅಥವಾ ಆದಾಯ ವೆಚ್ಚದಂದ ಅನುಭೋಗವು ಅಲ್ಪಾವಧಿಗೆ ಏರಿಕೆ ಆಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಅಥವಾ ಬಂಡವಾಳ ವೆಚ್ಚದಿಂದ ಜಿಡಿಪಿಗೆ ಮೂರು ಪಟ್ಟು ಪುಷ್ಟಿ ಕೊಡುತ್ತದೆ. ಸರ್ಕಾರವು ಕ್ರಮೇಣವಾಗಿ ಬಂಡವಾಳ ವೆಚ್ಚವನ್ನು ಜಿಡಿಪಿಯ ಶೇ. 3ರಷ್ಟು ಮಟ್ಟಕ್ಕೆ ಏರಿಸಬಹುದು ಎಂದು ಜೆಎಂ ಫೈನಾನ್ಷಿಯಲ್ ನಿರೀಕ್ಷಿಸುತ್ತಿದೆ.
Laxmi News 24×7