ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬೃಹತ್ ವ್ಯಾಪಾರ ಒಪ್ಪಂದ ಘೋಷಣೆ ಮಾಡಿದ್ದಾರೆ. ಜೊತೆಗೆ ಭಾರತದ ಮೇಲಿನ ಪ್ರತಿ ತೆರಿಗೆ ಭಾರವನ್ನ 25% ನಿಂದ 18% ಗೆ ಇಳಿಸಿರುವುದಾಗಿ ತಿಳಿಸಿದ್ದಾರೆ.
ಹೌದು. ಪ್ರಧಾನಿ ಮೋದಿ ಜೊತೆಗಿನ ಮಾತುಕತೆ ಬಳಿಕ ತನ್ನ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಸೋಷಿಯಲ್‌ನಲ್ಲಿ ಟ್ರಂಪ್ ಸುದೀರ್ಘ ಮಾಹಿತಿ ಹಂಚಿಕೊಂಡಿದ್ದಾರೆ. ಅಮೆರಿಕ ಭಾರತದ ಮೇಲಿನ ಸುಂಕವನ್ನ 25% ನಿಂದ 18% ಗೆ ಇಳಿಕೆ ಮಾಡಿದೆ. ವ್ಯಾಪಾರ ಒಪ್ಪಂದ, ರಷ್ಯಾ ಉಕ್ರೇನ್ ಯುದ್ಧ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಲ್ಲದೇ, ಪ್ರಧಾನಿ ಮೋದಿ ಜೊತೆಗೆ ಮಾತನಾಡುವುದು ಗೌರವದ ಸಂಗತಿ. ಅವರು ನನ್ನ ಆಪ್ತರಲ್ಲಿ ಒಬ್ಬರು. ಮೋದಿ ಭಾರತದ ಪ್ರಬಲ ಮತ್ತು ಗೌರವಾನ್ವಿತ ನಾಯಕ. ವ್ಯಾಪಾರ ಮತ್ತು ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ನಾವು ಇಂದು ಚರ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.
500 ಶತಕೋಟಿ ಡಾಲರ್ ಒಪ್ಪಂದ
ಮುಂದುವರಿದು… ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಿದೆ. ಪ್ರಧಾನಿ ಮೋದಿ ಕೂಡ ಒಪ್ಪಿಕೊಂಡಿದ್ದಾರೆ. ಭಾರತ ಇನ್ಮುಂದೆ ಅಮೆರಿಕ ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿ ಮಾಡಲಿದೆ. ಇದು ಉಕ್ರೇನ್ ವಿರುದ್ಧದ ಯುದ್ಧ ಕೊನೆಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಭಾರತದ ಮೇಲಿನ ಸುಂಕವನ್ನ 25% ನಿಂದ 18% ಗೆ ಇಳಿಕೆ ಮಾಡಿದೆ. ಜೊತೆಗೆ ಕೃಷಿ ಇಂಧನ, ಕಲ್ಲಿದ್ದಲು, ತಂತ್ರಜ್ಞಾನ ಸೇರಿದಂತೆ 500 ಶತಕೋಟಿ ಡಾಲರ್ ವ್ಯಾಪರಕ್ಕೆ ಒಪ್ಪಂದವಾಗಿದೆ. ಪ್ರತಿಯಾಗಿ ಭಾರತವು ಅಮೆರಿಕದ ಉತ್ಪನ್ನಗಳ ಮೇಲಿನ ತನ್ನ ಸುಂಕವನ್ನ ಶೂನ್ಯಕ್ಕೆ ಇಳಿಸುವ ನಿರೀಕ್ಷೆಯಿದೆ. ಜೊತೆಗೆ ಇತರ ಅಡೆತಡೆಗಳನ್ನೂ ನಿವಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಹಾಕಿದ್ದ ಸುಂಕಗಳು ಯಾವುದು?
10% ಮೂಲ ಸುಂಕ:
ಏಪ್ರಿಲ್ 2025 ರಿಂದ ಬಹುತೇಕ ಎಲ್ಲಾ ಅಮೆರಿಕದ ಆಮದುಗಳಿಗೆ ಅನ್ವಯಿಸಲಾದ ಸಾಮಾನ್ಯ ಸುಂಕ.
15% ಪ್ರತಿ ಸುಂಕ:
ಅಮೆರಿಕ ಉತ್ಪನ್ನಗಳ ಮೇಲೆ ಭಾರತವು ತನ್ನದೇ ಆದ ಹೆಚ್ಚಿನ ಸುಂಕ ಹಾಕಿದ್ದಕ್ಕೆ ವಿಧಿಸಿದ ಸುಂಕ.
25% ದಂಡ ಸುಂಕ:
ಆಗಸ್ಟ್ 27, 2025 ರಂದು ಹೆಚ್ಚುವರಿ ಸುಂಕವನ್ನು ಹಾಕಲಾಗುತ್ತಿದೆ. ನಿರ್ದಿಷ್ಟವಾಗಿ ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸಲು ಭಾರತ ನಿರಾಕರಿಸಿದ್ದಕ್ಕೆ ದಂಡದ ರೂಪದಲ್ಲಿ ಹಾಕಲಾಗುತ್ತಿದೆ. ಹೀಗಾಗಿ ಒಟ್ಟು 50% ಸುಂಕವನ್ನು ಅಮೆರಿಕ ಭಾರತದ ಕೆಲ ವಸ್ತುಗಳಿಗೆ ವಿಧಿಸಿತ್ತು.
ಹೆಚ್ಚುವರಿ ಸುಂಕ ವಿಧಿಸಿದ್ದು ಏಕೆ?
ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಫಂಡಿಂಗ್ ಮಾಡುತ್ತಿದೆ ಅನ್ನೋದು ಟ್ರಂಪ್ ಅವರ ಬಲವಾದ ಆರೋಪ ಆಗಿತ್ತು. ಅದಕ್ಕಾಗಿಯೇ ಮೊದಲು 25% ಸುಂಕ ವಿಧಿಸಿ, ನಂತರ 50% ಗೆ ಏರಿಸಿದ್ದರು ಟ್ರಂಪ್. ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದರು. ಇದೀಗ ಪಾಕ್‌ಗಿಂತಲೂ 1% ಸುಂಕವನ್ನ ಇಳಿಕೆ ಮಾಡಿದ್ದಾರೆ.
Laxmi News 24×7