ಮೈಸೂರು: ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮಗು ಹಾಗೂ ಓರ್ವ ವ್ಯಕ್ತಿ ಸಜೀವವಾಗಿ ದಹನವಾಗಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ಅಗಚಹಳ್ಳಿಯಲ್ಲಿ ನಡೆದಿದೆ. ತನ್ವೀತ್(5) ಹಾಗು ದೀಪಕ್ ಮೃತ ದುರ್ದೈವಿಗಳು.
ಕಳಸ ಮೂಲದ ಪೇಂಟರ್ ಭರತ್ ಮೈಸೂರಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪುತ್ರ ತನ್ವಿತ್ ಜೊತೆ ವಾಸವಾಗಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಭರತ್ ಎಣ್ಣೆ ಪಾರ್ಟಿ ಆಯೋಜಿಸಿದ್ದರು. ಸ್ನೇಹಿತರೆಲ್ಲ ರಾತ್ರಿ ಪೂರ ವಿಪರೀತ ಮದ್ಯಪಾನ ಮಾಡಿದ್ದರು. ಬಳಿಕ ಭರತ್ನ ಒಬ್ಬ ಸ್ನೇಹಿತ ಮನೆಗೆ ಬೀಗ ಹಾಕಿ ಅಲ್ಲಿಂದ ವಾಪಸ್ಸಾಗಿದ್ದರು ಎನ್ನಲಾಗಿದೆ.
ಮತ್ತೋರ್ವ ಸ್ನೇಹಿತ ದೀಪಕ್ ಭರತ್ ಹಾಗೂ ಮಗುವಿನ ಜೊತೆಯಲ್ಲಿ ಮನೆಯಲ್ಲಿ ಉಳಿದಿದ್ದಾರೆ. ಬಳಿಕ ಮನೆಗೆ ಬೆಂಕಿ ಹೊತ್ತಿಕೊಂಡಿದ್ದನ್ನ ಕಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ದೀಪಕ್ ಹಾಗೂ ಬಾಲಕ ತನ್ವೀತ್ ಸಾವನ್ನಪ್ಪಿದ್ದಾರೆ. ಭರತ್ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಅವರನ್ನ ಎ.ಸಿ.ಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ನಂದಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಪೆಟ್ರೋಲ್ ವಾಸನೆ ಬರುತ್ತಿದ್ದುದು ಗಮನಕ್ಕೆ ಬಂದಿದೆ. ಹೀಗಾಗಿ ಮನೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.