ಮೈಸೂರು: ಕೊರೊನಾದಿಂದ ಸೃಷ್ಟಿಯಾದ ಲಾಕ್‍ಡೌನ್ ಅದೆಷ್ಟೊ ಜನರ ಬದುಕನ್ನೆ ಕಸಿದುಕೊಂಡಿದೆ. ಆದರೆ ಒಬ್ಬ ವೃದ್ಧನ ಬಾಳಿಗೆ ಮಾತ್ರ ಹೊಸ ಬೆಳಕು ಮೂಡಿಸಿದೆ. ತಂದೆಯನ್ನು ಕಳೆದುಕೊಂಡ ಮಕ್ಕಳಿಗೆ ಈ ಲಾಕ್‍ಡೌನ್ ನಿಂದ ಮೂರು ವರ್ಷದ ಹಿಂದೆ ಕಳೆದುಕೊಂಡಿದ್ದ ಅಪ್ಪ ಸಿಕ್ಕಿದ್ದಾರೆ.
ಉತ್ತರ ಪ್ರದೇಶದ ರಾಜ್‍ಪುರ್ ನಿವಾಸಿ ಕರಮ್ ಸಿಂಗ್ ತನ್ನ ಕಿರಿಯ ಪುತ್ರನ ಮದುವೆಗೆ ಹಣ ಹೊಂದಿಸಬೇಕೆಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದರು. ನಂತರ ಮೈಸೂರಿಗೆ ಬಂದು ಕಳೆದ ಮೂರು ವರ್ಷದಿಂದ ಬೀದಿ ಬೀದಿ ಅಲೆದಾಡುತ್ತಿದ್ದರು.
ಮೂರು ವರ್ಷಗಳ ಹಿಂದೆ ಮನೆಯಿಂದ ಹೊರಟ ವೃದ್ಧ ಗೊತ್ತಾಗದೆ ಬೆಂಗಳೂರು ರೈಲು ಹತ್ತಿದ್ದಾರೆ. ಇಲ್ಲಿಗೆ ಬಂದ ನಂತರ ಭಾಷೆ ಗೊತ್ತಿಲ್ಲ, ಹಣವಿಲ್ಲದೆ ಖಿನ್ನತೆಗೊಳಗಾಗಿದ್ದಾರೆ. ನಂತರ ಮೈಸೂರಿಗೆ ಬಂದು ಕಳೆದ ಮೂರು ವರ್ಷದಿಂದ ಬೀದಿ ಬೀದಿ ಅಲೆದಾಡುತ್ತಿದ್ದರು. ಲಾಕ್‍ಡೌನ್ ವೇಳೆ ಮೈಸೂರು ಮಹಾ ನಗರ ಪಾಲಿಕೆ ನಿರ್ಗತಿಕರ ಕೇಂದ್ರ ತೆರೆದ ವೇಳೆ ಸ್ಥಳೀಯರ ಮಾಹಿತಿ ಮೇರೆಗೆ ಇವರನ್ನು ಕರೆತಂದು ನಿರ್ಗತಿಕರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು.
ಮಾನಸಿಕ ಅಸ್ವಸ್ಥ ಎಂದುಕೊಂಡಿದ್ದ ನಿರ್ಗತಿಕರ ಕೇಂದ್ರದ ಸಿಬ್ಬಂದಿಗೆ ಇವರ ಮಾತು ಕೇಳಿ ಅಚ್ಚರಿ ಮೂಡಿತ್ತು. ಆಗ ಅಲ್ಲಿನ ಸಿಬ್ಬಂದಿ ನಿಧಾನವಾಗಿ ಈತನ ಹಿನ್ನೆಲೆ ವಿಚಾರಿಸಿದಾಗ ಆತ ದಾರಿತಪ್ಪಿ ಬಂದಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಪೊಲೀಸರ ಸಹಾಯದಿಂದ ಆತನ ಗ್ರಾಮಸ್ಥರನ್ನು ಸಂಪರ್ಕ ಮಾಡಿದಾಗ ಅವರಿಗೆ ಇಬ್ಬರು ಮಕ್ಕಳಿರುವುದು ಸತ್ಯ ಎಂಬುದು ತಿಳಿದಿದೆ.
ಇದಾದ ಬಳಿಕ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ ತಂದೆಯನ್ನು ತೋರಿಸಿದಾಗ ಮಗ ತನ್ನ ತಂದೆ ಬದುಕಿರುವ ಸುದ್ದಿ ತಿಳಿದು ಊರೆಲ್ಲ ಹೇಳಿಕೊಂಡು ಸಂಭ್ರಮಿಸಿದ್ದಾನೆ. ಇದೀಗ ಪ್ರತಿದಿನ ನಿರ್ಗತಿಕರ ಕೇಂದ್ರದಿಂದ ಅಧಿಕಾರಿಗಳ ಮೊಬೈಲ್ ಮೂಲಕ ಕುಟುಂಬಸ್ಥರ ಸಂಪರ್ಕದಲ್ಲಿ ವೃದ್ಧನಿದ್ದು, ತಾನು ಊರಿಗೋಗುವುದಕ್ಕೆ ಖುಷಿಯಾಗುತ್ತಿದೆ ಎನ್ನುತ್ತಿದ್ದಾರೆ.
ವೃದ್ಧನ ಊರು ದೆಹಲಿಗೆ ಹತ್ತಿರವಾಗಿದ್ದು, ಮುಂದಿನ ರೈಲು ದೆಹಲಿಗೆ ತೆರಳುವಾಗ ಅವರನ್ನು ಊರಿಗೆ ಬಿಟ್ಟು ಬರುವುದಾಗಿ ನಿರ್ಧರಿಸಲಾಗಿದೆ.