ಬೆಳಗಾವಿ : ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಣವಾಗಿ ಬರುತ್ತಿರುವುದರಿಂದ ರೋಸಿ ಹೋದ ವಡಗಾವಿ ರೈತ ಗಲ್ಲಿಯ ಮಹಿಳೆಯರು ಮಂಗಳವಾರ ಖಾಲಿ ಕೊಡಗಳ ಸಮೇತ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಕಳೆದ ಹದಿನೈದು ದಿನಗಳಿಂದ ರೈತಗಲ್ಲಿಯಲ್ಲಿ ಬರುತ್ತಿರುವ ನೀರಿನಲ್ಲಿ ಚರಂಡಿ ನೀರು ಸೇರಿದ್ದು, ದುರ್ವಾಸೆ ಬರುತ್ತಿದೆ. ಬಳಸುವುದಕ್ಕೂ ಆಗದಷ್ಟು ವಾಸನೆ ಇರುವುದರಿಂದ ಸಾಕಷ್ಟು ಸಲ ಪಾಲಿಕೆಗೆ ತಿಳಿಸಿದರೂ ಪ್ರಯೋಜನವಾಗಿರಲಿಲ್ಲ. ಮಂಗಳವಾರವೂ ಪುನಃ ಅದೇ ನೀರು ಸರಬರಾಜು ಮಾಡಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು ಖಾಲಿ ಕೊಡಗಳ ಸಮೇತ ನೇರವಾಗಿ ಪಾಲಿಕೆ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಲು ಮುಂದಾದರು, ಈ ವೇಳೆ ಪೊಲೀಸರು ತಡೆದರು.
ಬಳಿಕ ಪಾಲಿಕೆ ಕಚೇರಿಯ ಮೆಟ್ಟಿಲುಗಳ ಮೇಲೆಯೇ ಧರಣಿ ಕುಳಿತ ಜನ, ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳನ್ನು ಕಳುಹಿಸಿ, ಸಮಸ್ಯೆ ಬಗಹರಿಸಿಕೊಡುವ ಭರವಸೆಯನ್ನು ಪಾಲಿಕೆ ಆಯುಕ್ತರು ನೀಡಿದ್ದರಿಂದ ಧರಣಿ ವಾಪಸ್ಸು ಪಡೆದುಕೊಂಡರು.
ಪಾಲಿಕೆ ಮತ್ತು ಎಲ್ ಆ್ಯಂಡ್ ಟಿ ಅಧಿಕಾರಿಗಳು ಮಧ್ಯಾಹ್ನ ರೈತಗಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರು. ತುರ್ತಾಗಿ ಬುಧವಾರದಿಂದ ಟ್ಯಾಂಕರ್ ನೀರು ಪೂರೈಸುವ ಭರವಸೆ ನೀಡಿದರು. ಸದ್ಯಕ್ಕೆ ಟ್ಯಾಂಕರ್ ನೀರು ಕೊಟ್ಟು ಸುಮ್ಮನಾಗಬಾರದು. ಶಾಶ್ವತವಾಗಿ ಶುದ್ಧ ನೀರು ಸರಬರಾಜು ಆಗುವಂತೆ ಪರಿಹಾರ ಕಲ್ಪಿಸಬೇಕು. ಇಲ್ಲದೇ ಹೋದಲ್ಲಿ ಚಕ್ಕಡಿಗಳ ಸಮೇತ ಪಾಲಿಕೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಿಲಂ ಬಿರ್ಜೆ, ಶಾಂತಾ ಕೇರವಾಡಕರ, ಲಕ್ಷ್ಮೀ ಬಿರ್ಜೆ, ಸವಿತಾ ಮರವೆ, ವಾಮನ ಕಿಲ್ಲೇಕರ, ರಾಜು ಮರವೆ, ವಾಹೀದ ಮುಜಾವರ, ಅರವಿಂದ ಅವಚಾರೆ ಇತರರಿದ್ದರು.
Laxmi News 24×7