ಬಾಲಿವುಡ್ನಲ್ಲೀಗ ಅತ್ಯಂತ ಚಲಾವಣೆಯಲ್ಲಿರುವ ಅಥವಾ ಲಾಕ್ಡೌನ್ ಹೊರತಾಗಿಯೂ ಬಹಳ ಬ್ಯುಸಿಯಾಗಿರುವ ನಟ ಯಾರೆಂದು ಊಹಿಸಬಲ್ಲಿರಾ ?
ನಿಮಗೆ ಆಶ್ಚರ್ಯವಾಗಬಹುದು . ಕೊವಿಡ್ -19 ಸೋಂಕಿಗೆ ಹೆದರಿ ಬಹಳಷ್ಟು ನಟ – ನಟಿಯರು ತಮ್ಮ ಮನೆಗಳಿಂದ ಆಚೆ ಬರುತ್ತಿಲ್ಲ . ಆದರೆ , ತನ್ನ ಕುಟುಂಬದ ಕೆಲವು ಸದಸ್ಯರೊಂದಿಗೆ ಖುದ್ದು ಸೋಂಕಿಗೊಳಗಾಗಿ ಮೂರು ವಾರಗಳ ಕಾಲ ಮುಂಬೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ ಬಾಲಿವುಡ್ನ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಈಗ ದಿನವಿಡೀ ಕೆಲಸ ಮಾಡಿಕೊಂಡೇ ಇದ್ದಾರೆ .
ಹೌದು , ನಿನ್ನೆಯಷ್ಟೇ ( ಅಕ್ಟೋಬರ್ 11) ತಮ್ಮ 78 ನೇ ಹುಟ್ಟಹಬ್ಬವನ್ನು ಬಹಳ ಸರಳ ರೀತಿಯಲ್ಲಿ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ಆಚರಿಸಿಕೊಂಡ ಬಿಗ್ ಬಿ, ತಮ್ಮ ಅರ್ಧಕ್ಕಿಂತ ಕಡಿಮೆ ವಯಸ್ಸಿನ ನಟರಿಗಿಂತ ಜಾಸ್ತಿ ಬ್ಯುಸಿಯಾಗಿದ್ದಾರೆ .
‘ಕೌನ್ ಬನೇಗಾ ಕರೋಡ್ಪತಿ’ಯ ಹೊಸ ಆವೃತಿ ಈಗಾಗಲೇ ಆರಂಭವಾಗಿರುವುದು ಎಲ್ಲರಿಗೂ ಗೊತ್ತಿದೆ . ಈ ಕಾರ್ಯಕ್ರಮಕ್ಕಾಗಿ ಬಚ್ಚನ್ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಟೆಯವರೆಗೆ ಶೂಟ್ ಮಾಡುತ್ತಾರೆ . ಸತತವಾಗಿ 12 ತಾಸು ಕೆಲಸ ಮಾಡಿದ ನಂತರ ಸ್ವಲ್ಪ ಹೊತ್ತು ಡಬ್ಬಿಂಗ್ ಕೆಲಸದಲ್ಲೂ ತೊಡಗುತ್ತಾರಂತೆ !
ಶತಮಾನದ ಮಹಾನ್ ನಟನಿಗೆ ದಣಿವಾಗುವುದಿಲ್ಲವೇ ? ಅಮಿತಾಬ್ ಅವರನ್ನು ಲೀಡ್ ರೋಲ್ನಲ್ಲಿರಿಸಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಮನ್ಮೋಹನ್ ದೇಸಾಯಿ ಅವರನ್ನು ಒಮ್ಮೆ ಪತ್ರಕರ್ತರು , ‘ ನಿಮ್ಮ ಪ್ರಕಾರ ಜನಪ್ರಿಯತೆಯ ಉತ್ತುಂಗದಲ್ಲಿರುವ ಮೂರು ನಟರು ಯಾರು ಅಂತ ಕೇಳಿದಾಗ , ‘ ನಂಬರ್ 1 ರಿಂದ 10 ರವರೆಗಿನ ಸ್ಥಾನಗಳು ಕೇವಲ ಅಮಿತಾಬ್ ಬಚ್ಚನ್ಗೆ ಸೇರಿದ್ದು , ನಂಬರ್ 11 ರಿಂದ ಉಳಿದವರ ಗಣತಿ ಶುರುವಾಗುತ್ತದೆ ,’ ಅಂತ ಹೇಳಿದ್ದರು !
ಌಂಗ್ರಿ ಯಂಗ್ಮ್ಯಾನ್ ಅಂಕಿತ ನಾಮದೊಂದಿಗೆ ಬಾಲಿವುಡ್ ಅನ್ನು 5 ದಶಕಗಳಿಂದ ಆಳುತ್ತಿರುವ ಬಿಗ್ ಬಿ ಅವರ ಕ್ರಿಯಾಶೀಲತೆ ಯುವಕರನ್ನು ನಾಚಿಸುತ್ತದೆ . ಯುವ ಮತ್ತು ಹಲವಾರು ಹೆಸರಾಂತ ನಟರು ಅನ್ಲಾಕ್ ಪ್ರಕ್ರಿಯೆ ಹಂತಹಂತವಾಗಿ ಶುರುವಾದಾಗಿನಿಂದ ಕೆಲಸಕ್ಕಾಗಿ ನಿರ್ಮಾಪಕರ ಮನೆಗಳಿಗೆ ಎಡತಾಕುತ್ತಿದ್ದರೆ , ಬಚ್ಚನ್ ಅವರು 2021 ರಲ್ಲೂ ಪುರುಸೊತ್ತಿಲ್ಲದೆ ದುಡಿಯುವಷ್ಟು ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡಿದ್ದಾರೆ . ಅವುಗಳಲ್ಲಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಜೊತೆ ನಟಿಸುತ್ತಿರುವ ‘ಬ್ರಹ್ಮಾಸ್ತ್ರ’ , ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ತಾರಾಗಣದಲ್ಲಿರುವ ವೈಜ್ಞಾನಿಕ ಚಿತ್ರ ( ಸೈ – ಫಿ ), ‘ ಡೆಡ್ಲೀ’ ಹೆಸರಿನ ಕಾಮಿಡಿ ಫಿಲ್ಮ್ ಮೊದಲಾದವು ಸೇರಿವೆ . ಹಾಗೆಯೇ ಶೂಟಿಂಗ್ ಸಂಫೂರ್ಣಗೊಂಡಿರುವ ‘ಝುಂಡ್’ ಮತ್ತು ರೂಮಿ ಜಾಫ್ರಿಯವರ ‘ಚೆಹೆರೆ’ ಸಿನಿಮಾಗಳ ಡಬ್ಬಿಂಗ್ ಕೆಲಸದಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ .
40 ವರ್ಷಗಳ ಹಿಂದೆ ಮನ್ಮೋಹನ್ ದೇಸಾಯಿ ಹೇಳಿದ್ದರಲ್ಲಿ ಏನಾದರೂ ತಪ್ಪಿದೆಯಾ ?