ಮುಂಬೈ: ತೆಲುಗು, ತಮಿಳು, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟ ಮುರಳಿ ಶರ್ಮಾ ಅವರ ತಾಯಿ ಸೋಮವಾರ ನಿಧನರಾಗಿದ್ದಾರೆ.
ಪದ್ಮಾ ಶರ್ಮಾ (76) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮುರಳಿ ಶರ್ಮಾ ತಾಯಿ ಮುಂಬೈನಲ್ಲಿ ನೆಲೆಸಿದ್ದು, ಅವರ ಸ್ವ-ಗೃಹದಲ್ಲೇ ಕೊನೆಯುಸಿರೆಳೆದರು. ಕಳೆದ ವರ್ಷ ಮುರಳಿ ಅವರ ತಂದೆ ವೃಜ್‍ಭೂಷಣ್ ಶರ್ಮಾ ನಿಧನರಾಗಿದ್ದರು. ಈಗ ತಾಯಿಯೂ ಕೂಡ ವಿಧಿವಶರಾಗಿದ್ದಾರೆ.
ಟಾಲಿವುಡ್ ಮತ್ತು ಬಾಲಿವುಡ್‍ನಲ್ಲಿ ತಮ್ಮ ವಿಭಿನ್ನ ಅಭಿನಯದ ಮೂಲಕವೇ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮುರಳಿ ಶರ್ಮಾ ಅವರು ನಟ, ಪೋಷಕ ನಟ ಮತ್ತು ಖಳನಟನಾಗಿಯೂ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ‘ಅಲಾ ವೈಕುಂಟಪುರಂಲೋ’ ಸಿನಿಮಾದಲ್ಲೂ ನಟಿಸಿದ್ದಾರೆ.
ಮುರಳಿ ಶರ್ಮಾ ‘ದಿಲ್ ವಿಲ್ ಪ್ಯಾರ್ ವ್ಯಾರ್’ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ನಂತರ ಮೇನ್ ಹೂ ನಾ, ಎಬಿಸಿಡಿ 2, ಬದ್ಲಾಪುರ್, ಧಮಾಲ್, ಬೇಬಿ, ಗೋಲ್‍ಮಾಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.