ಮೈಸೂರು: ಸಾಮೂಹಿಕ ಅತ್ಯಾಚಾರದಂತಹ ಗಂಭೀರ ಪ್ರಕರಣ ನಡೆದಿರುವ ಹೊತ್ತಿನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಮಧ್ಯಾಹ್ನದವರೆಗೂ ಯಾವುದೇ ಸಭೆ ನಡೆಸಿರಲಿಲ್ಲ. ನಂತರ ಮಧ್ಯಾಹ್ನ 1 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಆರಂಭಿಸಿದ್ದಾರೆ.
ಗುರುವಾರ ರಾತ್ರಿ ನಗರಕ್ಕೆ ಬಂದ ಸಚಿವರು, ಶುಕ್ರವಾರ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ, ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಸುತ್ತಾಟ ನಡೆಸಿದರು. ಇಲ್ಲಿ ಫೈರಿಂಗ್ ಸ್ಟಿಮಿಲೇಟರ್‌ನ್ನು ಉದ್ಘಾಟಿಸಿ, ಸಾಕಷ್ಟು ಹೊತ್ತು ಫೈರಿಂಗ್ ನಡೆಸುವ ದೃಶ್ಯ ವೀಕ್ಷಿಸಿದರು.
ಅತ್ಯಾಚಾರ ಪ್ರಕರಣ ಹಾಗೂ ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ಕುರಿತು ಅಧಿಕಾರಿಗಳೊಂದಿಗೆ ಮಧ್ಯಾಹ್ನದವರೆಗೂ ಸಭೆ ನಡೆಸಿರಲಿಲ್ಲ.
‘ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಬಗ್ಗೆ ತಮಗೆ ಸಹಮತ ಇಲ್ಲ’ ಎಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯ ಪ್ರಗತಿಯನ್ನು ತಮಗೆ ನೇರವಾಗಿ ವರದಿ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.