ಪಾಟ್ನಾ: ಇತ್ತೀಚೆಗೆ ಬಿಹಾರದಲ್ಲಿ ಇಬ್ಬರು ಮಕ್ಕಳ ಖಾತೆಗೆ ಸುಮಾರು 900 ಕೋಟಿ ರೂಪಾಯಿಗೂ ಹೆಚ್ಚು ಹಣ ಜಮಾ ಆಗಿತ್ತು. ಈ ಬೆನ್ನಲ್ಲೇ ರೈತನೋರ್ವನ ಖಾತೆಗೆ 50 ಕೋಟಿ ರೂಪಾಯಿ ಜಮೆಯಾದ ಬಳಿಕ ಈಗ ದಿನಗೂಲಿ ಕಾರ್ಮಿಕ ಬ್ಯಾಂಕ್ ಅಕೌಂಟ್ಗೆ 9.99 ಕೋಟಿ ರೂ. ಠೇವಣಿಯಾದ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಖಾತೆ ತೆರೆಯಲು ಹೋದ ದಿನಗೂಲಿ ಕಾರ್ಮಿಕನ ಅಚ್ಚರಿ ಕಾದಿತ್ತು. ತನ್ನ ಖಾತೆಯಲ್ಲಿ 9.99 ಕೋಟಿ ರೂಪಾಯಿ ಜಮಾ ಆಗಿರುವುದಾಗಿ ಬ್ಯಾಂಕ್ ಮ್ಯಾನೇಜರ್ ಹೇಳಿದಾಗ ಈತ ಶಾಕ್ಗೆ ಈಡಾಗಿದ್ದಾರೆ.
ವಿಚಿತ್ರವೆಂದರೆ, ವಿಪಿನ್ ಚೌಹಾಣ್ ಎಂಬ ಕಾರ್ಮಿಕ ತಾನು ಯಾವುದೇ ಬ್ಯಾಂಕಿನಲ್ಲಿ ಖಾತೆ ತೆರೆದಿಲ್ಲ ಎಂದು ಹೇಳಿಕೊಂಡಿದ್ದಾನೆ. ಬಿಹಾರದ ಸುಪಾಲ್ ಪಟ್ಟಣದ ಸಿಸೌನಿ ಪ್ರದೇಶದ ಚೌಹಾಣ್ ಹೊಸ ಖಾತೆ ತೆರೆಯಲು ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಖಾತೆ ತೆರೆಯಲು ಹೋದ ಈತನ ಹೆಸರಿನ ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ಪರಿಶೀಲಿಸಿದ್ದಾರೆ. ಈ ವೇಳೆ ಇವರ ಹೆಸರಿನಲ್ಲಿ 10 ಕೋಟಿಯಷ್ಟು ಹಣ ಬಂದು ಜಮಾ ಆಗಿರುವುದಾಗಿ ಪತ್ತೆಯಾಗಿದೆ. ಇದರಿಂದ ಚೌಹಾಣ್ ದಿಗ್ಭ್ರಾಂತರಾಗಿದ್ದಾರೆ. ಅಲ್ಲದೇ ನಾನು ಖಾತೆಯೇ ತೆರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.