ಚಿಕ್ಕಮಗಳೂರು: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲದ ಬಡ್ಡಿ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ನೀತಿಯನ್ನ ತೀವ್ರವಾಗಿ ಖಂಡಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮುಖ್ಯಮಂತ್ರಿಗಳು ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಕೇವಲ ಒಂದು ಕೋಮಿನ ಜನರನ್ನು ಓಲೈಸುವ ರಾಜಕಾರಣ ಮಾಡುವುದು ಇತರ ಸಮುದಾಯಗಳಿಗೆ ಮಾಡುವ ದೊಡ್ಡ ಅನ್ಯಾಯವಾಗಿದೆ. ಕೇವಲ ಒಂದು ವರ್ಗದ ಮತಗಳನ್ನು ನೆಚ್ಚಿಕೊಂಡು ಈ ರೀತಿ ತಾರತಮ್ಯ ಮಾಡುವುದು ಸಂವಿಧಾನ ವಿರೋಧಿ ನೀತಿಯಾಗುತ್ತದೆ. ಸರ್ಕಾರಕ್ಕೆ ಬಡವರ ಮೇಲೆ ನಿಜವಾದ ಕಾಳಜಿ ಇದ್ದರೆ ಎಲ್ಲಾ ನಿಗಮಗಳ ಮೂಲಕ ಸಾಲ ಪಡೆದಿರುವ ಬಡವರ ಬಡ್ಡಿಯನ್ನೂ ತಕ್ಷಣವೇ ಮನ್ನಾ ಮಾಡಲಿ ಎಂದು ಸವಾಲು ಹಾಕಿದರು.
ಇದೇ ವೇಳೆ, ಸಂಸದ ತೇಜಸ್ವಿ ಸೂರ್ಯ ಅವರನ್ನು ಪೊಳೀಸರು ವಶಕ್ಕೆ ಪಡೆದ ಬಗ್ಗೆ, ಆಕ್ರೋಶ ಹೊರಹಾಕಿದರು. ತೇಜಸ್ವಿ ಸೂರ್ಯ ಅವರು ಜನರ ಪರವಾಗಿ ಧ್ವನಿ ಎತ್ತಿದ್ದಕ್ಕೆ ಅವರನ್ನು ಬಂಧಿಸಿರುವುದು ಈ ಸರ್ಕಾರದ ಸರ್ವಾಧಿಕಾರಿ ಧೋರಣೆ ಹಾಗೂ ಜನವಿರೋಧಿ ನೀತಿಯನ್ನ ಎತ್ತಿ ತೋರಿಸುತ್ತಿದೆ. ಇಂತಹ ಜನವಿರೋಧಿ ನೀತಿಗಳು ಮತ್ತು ಸರ್ವಾಧಿಕಾರಿ ನಡವಳಿಕೆಗಳು ಪ್ರಜಾಪ್ರಭುತ್ವದಲ್ಲಿ ಬಹಳ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ರಾಜ್ಯದ ಜನತೆ ಕಾಂಗ್ರೆಸ್‌ಗೆ 136 ಸ್ಥಾನಗಳನ್ನು ನೀಡಿ ಅಧಿಕಾರಕ್ಕೆ ತಂದಿರುವುದು ಅಭಿವೃದ್ಧಿ ಮಾಡಲಿ ಎಂಬ ಆಶಯದಿಂದಲೇ ಹೊರತು, ಕೇವಲ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಮಾಡಲಿಕ್ಕಲ್ಲ. ಆದರೆ ಪ್ರಸ್ತುತ ಸರ್ಕಾರ ಜನವಿರೋಧಿ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರ ನಂಬಿಕೆಗೆ ದ್ರೋಹ ಬಗೆಯುತ್ತಿದೆ. ಸರ್ಕಾರದ ಕುರ್ಚಿ ಕಿತ್ತಾಟದಲ್ಲಿ ಜನರ ಕಷ್ಟಗಳನ್ನ ಕೇಳೋರೇ ಇಲ್ಲ. ಜನರಿಗೆ ಇವರ ಸಹವಾಸ ಸಾಕಪ್ಪಾ ಎಂಬಂತಾಗಿದೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಎಷ್ಟು ದಿನ ಇರ್ತಿವೋ ಗೊತ್ತಿಲ್ಲ. ಇರುವಷ್ಟು ದಿನ ಏನಾದ್ರು ಮಾಡಿಕೊಳ್ಳೋಣ ಎಂದು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Laxmi News 24×7