ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಇಂದು ತಮ್ಮ ಜನ್ಮದಿನದ ಅಂಗವಾಗಿ ಬೆಳಗಾವಿಯ ಜನತೆಗೆ ಭರ್ಜರಿ ಆಧ್ಯಾತ್ಮಿಕ ಉಡುಗೊರೆ ನೀಡಿದ್ದಾರೆ. ಸಹ್ಯಾದ್ರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹಾಬಳೇಶ್ವರ ದೇವಸ್ಥಾನವನ್ನು ಉದ್ಘಾಟಿಸಿದ ಸಚಿವರು, ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಮುತುವರ್ಜಿಯಿಂದ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಮಹಾಬಳೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭ ಇಂದು ಅದ್ಧೂರಿಯಾಗಿ ನೆರವೇರಿತು. ಶನಿವಾರ ದೇಗುಲವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, “ಜನರ ನೆಮ್ಮದಿಯೇ ನನಗೆ ಮುಖ್ಯ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈವರೆಗೆ 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗಿದ್ದು, ಮಹಾಶಿವರಾತ್ರಿಯ ಈ ಪವಿತ್ರ ಸಂದರ್ಭದಲ್ಲೇ ಶಿವನ ದೇವಸ್ಥಾನ ಉದ್ಘಾಟನೆಯಾಗುತ್ತಿರುವುದು ಅತ್ಯಂತ ತೃಪ್ತಿ ನೀಡಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಇಂದೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಹುಟ್ಟುಹಬ್ಬವೂ ಆಗಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಹಾಗೂ ಹೋಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೋಮದಲ್ಲಿ ಪಾಲ್ಗೊಂಡ ಸಚಿವರು ನಾಡಿನ ಜನರ ಕಲ್ಯಾಣಕ್ಕಾಗಿ ಸಂಕಲ್ಪ ಮಾಡಿದರು. ಕಾರ್ಯಕ್ರಮದಲ್ಲಿ ಮೃಣಾಲ್ ಹೆಬ್ಬಾಳಕರ್, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಚಿವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು. ಈ ಭವ್ಯ ಶಿವನ ದೇಗುಲ ಈಗ ಸಹ್ಯಾದ್ರಿ ನಗರದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ.
Laxmi News 24×7