ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಭೂ ಅಕ್ರಮಗಳು ವ್ಯಾಪಕವಾಗಿ ಸದ್ದು ಮಾಡುತ್ತಿವೆ. ನಾಗಮಂಗಲದಲ್ಲಿ ಬಗರ್ ಹುಕುಂನಲ್ಲಿ ಕೋಟ್ಯಂತ್ಯರ ರೂಪಾಯಿ ಅಕ್ರಮವಾದ ಬೆನ್ನಲ್ಲೇ ಇದೀಗ ಮಂಡ್ಯದ ಗ್ರಾಮ ಪಂಚಾಯತಿಯಲ್ಲಿ ಮತ್ತೊಂದು ಅಕ್ರಮ ಬೆಳಕಿಗೆ ಬಂದಿದೆ.
ಸರ್ಕಾರ ಮನೆ ಕಟ್ಟುವವರಿಗೆ ಎಲ್ಲಾ ಸವಲತ್ತುಗಳನ್ನ ನೀಡಬೇಕೆಂದು ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಇ-ಖಾತೆಯನ್ನ ನೀಡುತ್ತಿದೆ. ಈ ಇ-ಖಾತೆಯನ್ನ ಮಂಡ್ಯದ ಇಂಡುವಾಳು ಗ್ರಾಮ ಪಂಚಾಯತಿಯಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹಣದಾಸೆಗೆ ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿ 1881 ಇ-ಖಾತೆಗಳನ್ನ ಅಕ್ರಮವಾಗಿ ಮಾಡಿದ್ದಾರೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಭೇಟಿ ವೇಳೆ ಬೆಳಕಿಗೆ ಬಂದಿದೆ.
ಕಳೆದ ಮೇ ತಿಂಗಳಿನಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಮಂಡ್ಯ ಜಿಲ್ಲೆಯ ಹಲವು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಇಂಡುವಾಳು ಪಂಚಾಯಿತಿಯಲ್ಲಿ ಕಡತಗಳು ಮಿಸ್ ಆಗಿದ್ದವು. ಹೀಗಾಗಿ ಉಪ ಲೋಕಾಯುಕ್ತ ಈ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿದ್ದರು. ಈ ತನಿಖೆ ನಡೆಯುವ ವೇಳೆ ಇಲ್ಲಿ ಇ-ಖಾತೆಯಲ್ಲಿ ಅಕ್ರಮವೆಸಗಿದೆ ಎಂದು ತಿಳಿದುಬಂದಿದೆ.
ಇಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಸೇರಿ ಅಕ್ರಮ ಬಡಾವಣೆಗಳನ್ನ ಮಾಡಲು ಒಂದು ಖಾತೆಗೆ ಒಂದು ಲಕ್ಷ ಹಣ ಪಡೆದು ಅಕ್ರಮವಾಗಿ ಇ-ಖಾತೆ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. 2021 ರಿಂದ 2025 ರಲ್ಲಿ ಇಂಡುವಾಳು ಪಂಚಾಯತಿಯಲ್ಲಿ 1929 ಖಾತೆಗಳನ್ನ ಮಾಡಲಾಗಿದ್ದು, ಇದರಲ್ಲಿ ಕೇವಲ 48 ಖಾತೆಗಳು ಅಷ್ಟೇ ನಿಯಮ ಬದ್ಧಗಳಾಗಿವೆ. ಉಳಿದ ಎಲ್ಲಾ ಇ-ಖಾತೆಗಳು ಅಕ್ರಮ ಎಂದು ತಿಳಿದುಬಂದಿದೆ. ಹೀಗಾಗಲೇ ತಹಶೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಸಹ ಕೊಟ್ಟಿದೆ. ಇದೀಗ ಎರಡನೇ ಹಂತದಲ್ಲಿ ಸದ್ಯ ಈ ಸಂಬಂಧ ಇಒ ಲೋಕೇಶ್ ಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದೆ.
ಒಟ್ಟಾರೆ ಜನರಿಗೆ ಅನುಕೂಲವಾಗಲು ಕೆಲಸ ಮಾಡಿಕೊಡಬೇಕಾದ ಅಧಿಕಾರಿಗಳು ಹಣದಾಸೆಗೆ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮವೆಸಗಿರೋದು ಸೋಜಿಗದ ವಿಚಾರ. ತನಿಖೆ ಬಳಿಕ ಇವರುಗಳಿಗೆ ಯಾವ ಶಿಕ್ಷೆ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
Laxmi News 24×7