ಬೆಳಗಾವಿ: ಗಡಿ ಸಮಸ್ಯೆ ಹಾಗೂ ಮಹದಾಯಿ ನೀರು ಹಂಚಿಕೆಯ ವಿಷಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿದಿದೆ ಆದರೆ ಅವರು ಬುದ್ದಿವಂತರಾಗಿದ್ದಾರೆ ಎಂದು ಗದುಗಿನ ತೋಂಟದಾರ್ಯ ಶ್ರೀ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.
ಜ.೧೦ ರಂದು ಶಿವಬಸವ ನಗರದ ರುದ್ರಾಕ್ಷಿಮಠದ ಪ್ರಭುದೇವ ಸಭಾಂಗಣದಲ್ಲಿ ಮಹದಾಯಿ -ಕಳಸಾ ಬಂಡೂರಿಯೋಜನೆ ಅನುಷ್ಠಾನ ವಿಳಂಬ ಹಾಗೂ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದದ ಕುರಿತ ವಿವಿಧ ಮಠಾಧೀಶರ ನೇತೃತ್ವದಲ್ಲಿ ಚಿಂತನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಮೂರ ನಾಲ್ಕು ದಶಕ ಕಳಸಾ ಬಂಡೂರಿ, ಗಡಿ ಸಮಸ್ಯೆ ಜಲ್ವಂತವಾಗಿ ಕಾಡುತ್ತಿದೆ. ಇವುಗಳನ್ನು ಶಾಶ್ವತವಾಗಿ ಪರಿಹಾರ ಮಾಡುವ ಕಾರ್ಯವನ್ನು ಮಾಡಬೇಕೆಂದು ಹೋರಾಟಗಾರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ನರಗುಂದನಲ್ಲಿ ರೈತರು ನಿರಂತರವಾಗಿ ಕಳಸಾ ಬಂಡೂರಿ ಅನುಷ್ಠಾನ ಮಾಡುವಂತೆ ಹೋರಾಟ ಮಾಡುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರಗಳು ಹಾಗೂ ರಾಜಕೀಯ ಪಕ್ಷಗಳು ಒಬ್ಬರ ಮೇಲೆ ಇನ್ನೊಬ್ಬರು ಹಾಕುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ಯಾರಿಗೂ ಕಳಸಾ ಬಂಡೂರಿ ಮಹದಾಯಿ ಅನುಷ್ಠಾನಗೊಳಿಸುವಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದರು. ರಾಜಕಾರಣಿಗಳು ಮೀನಮೇಷ ಮಾಡುತ್ತಿದ್ದಾರೆ. ಬೇರೆಯರಿಂದ ಸುಪ್ರೀಂ ನಲ್ಲಿ ನೋಟಿಫಿಕೇಷನ್ ಹಾಕಿಸುತ್ತಾರೆ ಎಂದರು.
ಮನಸ್ಸು ಮಾಡಿದರೆ ಸರಕಾರ ಮನಸ್ಸು ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ, ಗಡಿ ಸಮಸ್ಯೆ ಗೊತ್ತಿವೆ. ಅವರು ಬುದ್ದಿವಂತ ಪ್ರಧಾನಿಯಾಗಿದ್ದಾರೆ.
ಮಹದಾಯಿ ಸಮಸ್ಯೆಯನ್ನು ಪ್ರಧಾನಿ ಮುಂದಾಗಿ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಿಎಂ ಕರೆಸಿ ಬಗೆಹರಿಸಬಹುದು. ಆದರೆ ಅವರು ಅದನ್ನು ಮಾಡುತ್ತಿಲ್ಲ ಎಂದರು.
ಜನರ ಬೇಡಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗಮನ ಹರಿಸುತ್ತಿಲ್ಲ. ಪೌರತ್ವ ಕಾಯ್ದೆ ನಾವು ಕೇಳಿರಲಿಲ್ಲ. ಅದನ್ನು ಅನುಷ್ಠಾನಕ್ಕೆ ತಂದರು.ಮಹದಾಯಿ ಹಾಗೂ ಗಡಿ ವಿಚಾರದಲ್ಲಿ ಮೋದಿ ಚಕಾರ್ ಎತ್ತುತ್ತಿಲ್ಲ ಏಕೆ ಎಂದರು.
ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಸಾಕಷ್ಟು ಹೋರಾಟ ನಡೆಸಿದೇವು. ಅದನ್ನು ಮರೆ ಮಾಚಲು ಪ್ರಧಾನಿ ನರೇಂದ್ರ ಮೋದಿ ಅವರು ಪಾರ್ಲಿಮೆಂಟ್ ನಲ್ಲಿ ಬಸವಣ್ಣನವರ ಫೋಟೋ ಹಾಕಿದ ತಕ್ಷಣ ಆ ಹೋರಾಟ ದೂರ ಮಾಡುತ್ತಾರೆ. ಬರೆದುಕೊಟ್ಟ ವಚನಗಳನ್ನು ಓದಿದರೆ ಲಿಂಗಾಯತರಿಗೆ ನ್ಯಾಯ ದೊರಕುವುದಿಲ್ಲ ಎಂದು ಪ್ರಧಾನಿ ಮೋದಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉದ್ದವ ಠಾಕ್ರೆ ಉದ್ಬವಿಸಿದ್ದು ಶಾಸ್ವತವಲ್ಲ. ಗಡಿ ಭಾಗ ಬೆಳಗಾವಿಗೆ ಕಾವಿ ಕಾವಲು ಇದೆ. ಸಿಎಂ ಯಡಿಯೂರಪ್ಪ ಅವರು ಗಡಿ ಉಸ್ತುವಾರಿ ನೇಮಿಸದಿದ್ದರೆ ನಮಗೆ ತೊಂದರೆ ಇದೆ.
ನಾಡು, ನುಡಿಯ ಬಗ್ಗೆ ತೊಂದರೆಯಾದರೆ ನಮ್ಮ ಸಂಪ್ರದಾಯಿಂದ ಹೊರ ಬರಬೇಕಾಗುತ್ತದೆ. ಕಳಸಾ ಬಂಡೂರಿ ಯೋಜನೆ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಉತ್ತರ ಕರ್ನಾಟಕದ ಬಗ್ಗೆ ಅಸೆಡ್ಡೆತನ ತೋರುತ್ತಿರುವುದು ಸರಿಯಲ್ಲ ಎಂದರು.
ಉತ್ತರ ಕರ್ನಾಟಕಕ್ಕೆ ಪ್ರತಿಸಾರಿಯೂ ಮುಗಿಗೆ ತುಪ್ಪ ಸವರುತ್ತಿದ್ದಾರೆ. ಜನವರಿ 17ಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ. ಆಗ ಗಡಿ ಉಸ್ತುವಾರಿಯನ್ನು ನೇಮಕ ಮಾಡಬೇಕೆಂದು ಸರಕಾರಕ್ಕೆ ಸಲಹೆ ನೀಡಿದರು.
ಗಡಿ ಉಸ್ತುವಾರಿ ನೇಮಿಸಲಿಲ್ಲ ಎಂದರೆ ನಾವೆಲ್ಲಾ ಏಳಬೇಕು, ಎದ್ದು ಸರಕಾರವನ್ನು ಕೇಳಬೇಕು.
ರೈತರ ಬಳಿ ಬಾರಕೋಲು ಇದೆ, ಸ್ವಾಮೀಜಿಗಳ ಬಳಿ ಬೆತ್ತ ಇವೆ ಅವನ್ನ ಹೊರ ತೆಗೆಯುತ್ತೇವೆ ಎಂದು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಿತ್ತೂರು ಕಲ್ಮಠದ ಶ್ರೀ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಮಹದಾಯಿ ಹಾಗೂ ಕಳಸಾಬಂಡೂರಿ ಅನುಷ್ಠಾನ ಕುರಿತು ರಾಜಕೀಯ ಪಕ್ಷಗಳ ನಾಯಕರ ನಿಲುವು ಸ್ಪಷ್ಟಪಡಿಸಬೇಕು. ಕಲ್ಯಾಣ ಕಿತ್ತೂರು ಕರ್ನಾಟಕದ ಕುರಿತು ಸಾಕಷ್ಟು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಪ್ರತಿಯೊಂದು ವಿಷಯಕ್ಕೂ ಹೋರಾಟ ಮಾಡುವ ದುಸ್ಥಿತಿ ಬಂದಿರುವುದು ವಿಪರ್ಯಾಸದ ಸಂಗತಿ ಎಂದರು.
ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಮಾತನಾಡಿ, ಕಳಸಾ ಬಂಡೂರಿ ಮಹದಾಯಿ ಯೋಜನೆ ಕೇವಲ ವಿದ್ಯುತ್ ಉತ್ಪಾನೆಗೆ ಮಾತ್ರ ಸೀಮಿತವಾಗಿದೆ. 1965ರಲ್ಲಿ ಕರ್ನಾಟಕಕ್ಕೆ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲಾಗಿತ್ತು. ಆದರೆ ಇತ್ತೀಚೆಗೆ ಸೋಲಾರ್, ಸೌರ ವಿದ್ಯುತ್ ಸೌಲಭ್ಯವಿದೆ. ಈಗ ಮಹದಾಯಿಯಿಂದ ವಿದ್ಯುತ್ ಉತ್ಪಾದನೆ ಬೇಡ. ಉತ್ತರ ಕರ್ನಾಟಕದ ಜನರಿಗೆ ಕುಡಿಯುವ ನೀರಿನ ಪ್ರಶ್ನೆಯಾಗಿದೆ ಎಂದರು.
ಕರ್ನಾಟಕದಲ್ಲಿ 25 ಜನ ಸಂಸದರು ಹಿಜಡಾಗಳಿದ್ದಾರೆ. ಕೋಣದ ಚರ್ಮ ಇವರದ್ದಾಗಿದೆ. ಕಳಸಾ ಬಂಡೂರಿ ಯೋಜನೆ ಅನುಷ್ಟಾನ ಮಾಡುವುದಾಗಿ ಕಳೆದ22 ವರ್ಷಗಳ ಹಿಂದೆಯೇ ಜನಪ್ರತಿನಿಧಿಗಳು ಭರವಸೆ ನೀಡಿದ್ದರು.ಆದರೆ ಇಲ್ಲಿಯವರೆಗೂ ಅದು ಸಾಕಾರಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳಸಾ ಬಂಡೂರಿ ಹೋರಾಟ ನರಗುಂದ ಮಾದರಿಯಲ್ಲಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಕೊಡಲಿದ್ದೇವೆ. ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಮಾಡುವವರೆ ಅವರೆ ಹಿಂಪಡೆಯುವವರು ಅವರೆ ಜನಪ್ರತಿನಿಧಿಗಳು ತಮ್ಮ ಒಣ ರಾಜಕಾರಣಕ್ಕೆ ಉತ್ತರ ಕರ್ನಾಟಕದ ಜನರನ್ನು ಬಲಿಪಶು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಚಿಂತನಾ ಸಭೆಯಲ್ಲಿ ಆದ ನಿರ್ಣಯಗಳೇನು ?
೧. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದವು ಕರ್ನಾಟಕದ ಪಾಲಿಗೆ ಮುಗಿದ ಅಧ್ಯಾಯ. ಆದರೆ ನೆರೆಯ ಮಹಾರಾಷ್ಟ್ರವು ರಾಜಕೀಯ ಕಾರಣಗಳಿಗಾಗಿ ಮೇಲಿಂದ ಮೇಲೆ ಈ ವಿವಾದವನ್ನು ಕೆಣಕುತ್ತಾ ಗಡಿಭಾಗದ ಭಾಷಾ ಸೌಹಾರ್ದಕ್ಕೆ ಧಕ್ಕೆ ತರುತ್ತಿರುವುದನ್ನು ಸಮಾವೇಶ ಖಂಡಿಸಿತು.
ಕಳೆದ ಹದಿನೈದು ವರ್ಷಗಳಿಂದ ಸರ್ವೋಚ್ಛ ನ್ಯಾಯಾಲಯದ ಮುಂದಿರುವ ಗಡಿ ವಿವಾದ ಪ್ರಕರಣವು ಇನ್ನೂ ವಿಚಾರಣೆ ಹಂತದಲ್ಲಿದೆ. ಮಹಾರಾಷ್ಟ್ರವು ಗಡಿ ಭಾಗದಲ್ಲಿನ ಶಾಂತಿಯನ್ನು ಕದಡಲು ಯತ್ನಿಸುತ್ತಿರುವುದನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಗಡಿಭಾಗದ ಕನ್ನಡಿಗರನ್ನು ಹಾಗೂ ಕನ್ನಡ ಸಂಘಟನೆಗಳನ್ನು ಬಲಗೊಳಿಸಲು ಸರ್ವ ರೀತಿಯ ಕ್ರಮ ಕೈಗೊಳ್ಳಬೇಕು. ಗಡಿಗೆ ಸಂಬಂಧಿಸಿದಂತೆ ಗಡಿ ಸಂರಕ್ಷಣಾ ಆಯೋಗ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ಕೂಡಲೇ ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕೆಂದು ಈ ಸಭೆಯು ರಾಜ್ಯ ಸರಕಾರವನ್ನು ಆಗ್ರಹಿಸಿತು. ಕೂಡಲೇ ಉನ್ನತ ಮಟ್ಟದ ಸಭೆಯನ್ನು ಕರೆಯುವಂತೆ ಒತ್ತಾಯಿಸಿತು.
೨. ಮುಂಬೈ ಕರ್ನಾಟಕದ ಏಳು ಜಿಲ್ಲೆಗಳ ಹದಿಮೂರು ತಾಲೂಕುಗಳಿಗೆ ಸಂಬಂಧಿಸಿದಂತೆ ಕಳಸಾ ಬಂಡೂರಿ ಯೋಜನೆಯ ಅನುಷ್ಠಾನ ಸಾಧ್ಯವಾಗದಿರುವುದಕ್ಕೆ ರಾಜಕೀಯ ಪಕ್ಷಗಳ ನಿರಾಸಕ್ತಿಯ ಕಾರಣವಾಗಿದೆ. ೨೦೧೮ ರ ಆಗಸ್ಟ್ ೧೪ರಂದು ನ್ಯಾಯಮೂರ್ತಿ ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ ತನ್ನ ತೀರ್ಪು ನೀಡಿತ್ತು. ತೀರ್ಪು ಬಂದು ೧೭ ತಿಂಗಳು ಆದರೂ ಕೇಂದ್ರ ಸರಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಈ ಮಧ್ಯೆ ಪಾಂಚಾಲ್ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಸಂಬಂಧಿಸಿದ ರಾಜ್ಯಗಳು ಮೇಲ್ಮನವಿ ಸಲ್ಲಿಸಿವೆ ನ್ಯಾಯಾಂಗದಲ್ಲಿ ಇರುವಾಗಲೇ ಈ ವಿವಾದ ಇತ್ಯರ್ಥವಾಗಬೇಕಾದರೆ ವಿಳಂಬವಾಗುವ ಸಾಧ್ಯತೆ ಇದೆ. ಆದ್ದರಿಂದ ಈ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸಲು ಪ್ರಧಾನಿ ಮುಂದಾಗಬೇಕು ಎಂದು ಒತ್ತಾಯಿಸಲಾಯಿತು.
ಕೇಂದ್ರದ ಮಧ್ಯಸ್ಥಿಕೆಯಲ್ಲಿ ಮಹದಾಯಿ ನೀರಿನ ವಿವಾದವನ್ನು ಬಗೆಹರಿಸುವ ಸಲುವಾಗಿ ರಾಜ್ಯದ ೨೮ ಸಂಸದರು ರಾಜ್ಯಸಭೆಯ ಸದಸ್ಯರು ಕೂಡಲೇ ಸ್ವಪಕ್ಷೀಯ ಮತ್ತು ಮಹಾದಾಯಿ ಹೋರಾಟಗಾರರ ನಿಯೋಗವನ್ನು ದಿಲ್ಲಿಗೆ ತೆಗೆದುಕೊಂಡು ಹೋಗಬೇಕು. ಅಗತ್ಯ ಬಿದ್ದರೆ ಕೇಂದ್ರ ಸಂಪುಟದಲ್ಲಿರುವ ಕರ್ನಾಟಕ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಕ್ಕೂ ಸಿದ್ಧರಾಗಬೇಕೆಂದು ಈ ಸಮಾವೇಶದಲ್ಲಿ ಒತ್ತಾಯಿಸಲಾಯಿತು.
ನಿಡಸೋಸಿಯ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ಸೇರಿದಂತೆ ವಿವಿಧ ಮಠಾಧೀಶರು, ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ರೈತ ಮುಖಂಡ ಸಿದ್ದಗೌಡ ಮೋದಗಿ ಸೇರಿದಂತೆ ಇನ್ನಿತರರು ಹಾಜರಿದ್ದರು.