ಮಡಿಕೇರಿ: ಹಳ್ಳಿ, ಹಳ್ಳಿಗಳನ್ನು ಸುತ್ತುತ್ತಾ ಜಾನುವಾರುಗಳನ್ನು ಖರೀದಿಸಿ, ಮಾರಾಟ ಮಾಡ್ತಿದ್ದ ವ್ಯಾಪಾರಿಯೊಬ್ಬರು ಕಾಫಿ ತೋಟವೊಂದರಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ. ಒಂದು ವಾರದ ಬಳಿಕ ವ್ಯಾಪಾರಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಳತ್ತೂರಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಬೆಟೋಳಿ ಗ್ರಾಮದ ನಿವಾಸಿ ಮೂಸಾ(65) ಮೃತ ದುರ್ದೈವಿ. ಮೂಸಾ ಏಪ್ರಿಲ್ 7ರಂದು ಆಪ್ತರೊಬ್ಬರ ಬಳಿ ಹಣ ಪಡೆದು ಸಮೀಪದ ಕೋಲ್ಕೋಡು ಗ್ರಾಮಕ್ಕೆ ದನದ ವ್ಯಾಪಾರಕ್ಕೆ ಹೋಗಿದ್ದರು. ಅಲ್ಲಿ ಗ್ರಾಮಸ್ಥರೊಬ್ಬರಿಂದ 18 ಸಾವಿರಕ್ಕೆ ದನಗಳನ್ನು ಖರೀದಿಸಿ ವಾಪಸ್ ಮನೆಗೆ ಬರುವ ವೇಳೆ ನಾಪತ್ತೆ ಆಗಿದ್ದರು. ಇದಾದ ಬಳಿಕ ಆತಂಕಕ್ಕೊಳಗಾದ ಮನೆಯವರು ವಿರಾಜಪೇಟೆ ಟೌನ್ ಸ್ಟೇಷನ್‍ನಲ್ಲಿ ಮೂಸಾ ಕಾಣಿಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಪೊಲೀಸರು ಮೂಸಾ ಅವರನ್ನು ಹುಡುಕುತ್ತಿದ್ದ ವೇಳೆಯೇ ಕೊಳತ್ತೂರಿನ ಕಾಫಿ ತೋಟದಿಂದ ಕೆಟ್ಟ ವಾಸನೆ ಬರುತ್ತಿದ್ದನ್ನು ಸ್ಥಳೀಯರೊಬ್ಬರು ಪೊಲೀಸರಿಗೆ ತಿಳಿಸಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದಾಗ ಪತ್ತೆಯಾದ ಮೃತದೇಹ ಮೂಸಾ ಅವರದ್ದೇ ಎಂಬುದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮೂಸ ಅವರ ಮಕ್ಕಳು, ನಾವು ಮನೆಯಲ್ಲಿ ಹಸುಗಳನ್ನು ಸಾಕಿದ್ದೇವೆ. ತಂದೆ ಹಸುಗಳನ್ನು ಖರೀದಿಸಲು ಕೋಲ್ಕೋಡು ಗ್ರಾಮಕ್ಕೆ ತೆರೆಳಿದ್ದರು. ಆದರೆ ಮನೆಗೆ ವಾಪಸ್ ಬಂದಿಲ್ಲ. ಬಹುಶಃ ತಂದೆ ಹಸುಗಳನ್ನು ಮನೆಗೆ ಕರೆತರುವ ಮಾರ್ಗ ಮಧ್ಯೆ ಯಾರೋ ದುಷ್ಕರ್ಮಿಗಳು ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಬೆಟ್ಟೋಳಿ ಗ್ರಾಮದ ಗುಂಪೊಂದು ಮೂಸಾರನ್ನು ಹುಡುಕಲು ಬಾಳಗೋಡುವಿಗೆ ಹೋಗಿದ್ದಾಗ, ಎರಡೂ ಊರಿನ ಗುಂಪುಗಳ ಮಧ್ಯೆ ಪರಸ್ಪರ ಹಲ್ಲೆಯೂ ನಡೆದಿತ್ತು. ಈ ವೇಳೆ ಕೆಲವರ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು