Breaking News

ಕರೆಂಟ್, ಮೂಲಭೂತ ಸೌಕರ್ಯ ಇಲ್ಲ – ದುಬಾರೆ ಸಾಕಾನೆ ಶಿಬಿರದ ಮಾವುತ, ಕಾವಾಡಿಗಳ ಸಮಸ್ಯೆ

Spread the love

ಮಡಿಕೇರಿ: ದೂರದಿಂದ ಬಂದು ದೋಣಿಯಲ್ಲಿ ವಿಹರಿಸಿ, ಆನೆ ಸಫಾರಿ ಮಾಡಿ ಒಂದಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಮೈಮರೆತು ನೀರಾಟವಾಡಿ ತಮ್ಮ ಊರುಗಳಿಗೆ ಹಿಂದಿರುಗುವ ಪ್ರವಾಸಿಗರಿಗೆ ದುಬಾರೆ  ಒಂದು ಅದ್ಭುತ ತಾಣ. ಇಷ್ಟೊಂದು ಖ್ಯಾತಿ ಪಡೆದ ಪ್ರವಾಸಿ ತಾಣ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ.

ಕೊಡಗು  ಜಿಲ್ಲೆಯ ವಿರಾಜಪೇಟೆ  ತಾಲೂಕಿನಲ್ಲಿರುವ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳಿವೆ. ಇಷ್ಟೊಂದು ಖ್ಯಾತಿ ಪಡೆದ ಪ್ರವಾಸಿ ತಾಣ ಮಾತ್ರ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಎಂಬುದು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನ ಕಣ್ಣಿಗೆ ರಾಚುವ ಕಟುಸತ್ಯ. ಕಾರಣ ಇಲ್ಲಿನ ಮಾವುತ, ಕಾವಡಿಗಳು ಇರುವ ಮನೆಗಳಿಗೆ ಸರಿಯಾದ ರೀತಿಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೇ ಕಂಗಾಲಾಗಿದ್ದಾರೆ. ಅಲ್ಲದೇ ಇಲ್ಲಿರುವ ನೂರಾರು ಕುಟುಂಬಗಳ ಮಕ್ಕಳಿಗೆ ಅಂಗನವಾಡಿ ಕೇಂದ್ರ ಇದೆ. ಅದರೆ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕರು ಇಲ್ಲದೇ ಕಳೆದ ಎರಡು ವರ್ಷಗಳಿಂದ ಅಂಗನವಾಡಿಯನ್ನು ಮುಚ್ಚಲಾಗಿದೆ.

ಇನ್ನೂ ದುಬಾರೆ ಸಾಕಾನೆ ಶಿಬಿರದಲ್ಲಿ ವಾಸ ಮಾಡುತ್ತಿರುವ ನೂರಾರು ಕುಟುಂಬಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ಇಲ್ಲದೇ ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿದೆ. 2014-15ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸೌರಶಕ್ತಿಯಿಂದ ಪ್ರತಿ ಮನೆ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲು ಸುಮಾರು 100 ಸೋಲಾರ್ ಪ್ಯಾನಲ್‌ಗಳನ್ನು ಹಾಕಲಾಗಿದೆ. ಆದರೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಇಲ್ಲದೇ ಇದೀಗ ಎಲ್ಲವೂ ಕಾಡುಪಾಲು ಆಗಿದೆ.

ಅಷ್ಟೇ ಅಲ್ಲದೇ ಇತ್ತಿಚಿನ ದಿನಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಸರಬರಾಜು ಮಾಡಲು ವಿದ್ಯುತ್ ಇಲಾಖೆ ಮುಂದಾಗಿದೆ. ಆದರೆ ವಿದ್ಯುತ್ ಇಲಾಖೆಯ ಅಧಿಕಾರಿಗಳು ಪ್ರತಿ ಮನೆಮನೆಗಳಿಗೆ ವಿದ್ಯುತ್ ಲೈನ್ ಎಳೆಯುವುದಕ್ಕೆ ಮರಗಳ ಮೇಲೆ ವಿದ್ಯುತ್ ಕೇಬಲ್ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಗಾಳಿ ಮಳೆ ಹೆಚ್ಚಾಗಿ ಮರಗಳು ಧರಾಶಾಹಿ ಆದರೆ ಸಾಕಾನೆಗಳಿಗೆ ಮಾವುತರಿಗೆ ಜೀವ ಹಾನಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ದುಬಾರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿ ಇನ್ನೂ ಕೂಡ ಆದಿಮಾನವರಂತೆ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿರುವ ವಸತಿಗೃಹಗಳಿಗೆ ವಿದ್ಯುತ್ ಸೌಲಭ್ಯವಿಲ್ಲ. ಹಾಗಾಗಿ ಸೀಮೆಣ್ಣೆ ದೀಪದಲ್ಲಿ ಯಾವುದೇ ಆಧುನಿಕ ಸೌಕರ್ಯವಿಲ್ಲದೆ ದಿನ ಕಳೆಯುವಂತಾಗಿದೆ. ಎಲ್ಲದಕ್ಕೂ ಕಾವೇರಿ ನದಿಯನ್ನು ದೋಣಿಯಲ್ಲಿ ದಾಟಿ ಹೋಗಬೇಕಾಗಿರುವುದರಿಂದ ಅನಾರೋಗ್ಯ ಅಥವಾ ಇನ್ನೇನಾದರೂ ಅವಘಡ ಸಂಭವಿಸಿದರೆ ದೇವರೇ ಗತಿ. ಬೇರೆ ಕಡೆಗಳಿಗೆ ಹೋಲಿಸಿದರೆ ದುಬಾರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳದ್ದು ಮಾತ್ರ ನಾಯಿಪಾಡಾಗಿದೆ ಎಂಬುದು ಮಾವುತ, ಕಾವಾಡಿಗಳ ಅಳಲು.

ಒಟ್ಟಾರೆ ದುಬಾರೆ ಆನೆ ಶಿಬಿರವು ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿದ್ದು, ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಡುವ ಮೂಲಕ ಅಭಿವೃದ್ಧಿಯತ್ತ ಸಂಬಂಧಿಸಿದವರು ಗಮನಹರಿಸಬೇಕಾದ ಅಗತ್ಯವಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ