ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಸಿನಿಮಾ ರಂಗ ಸಂಪೂರ್ಣ ಸ್ತಬ್ಧವಾಗಿದ್ದು, ನಟ, ನಟಿಯರು ಸಹ ತಮ್ಮದೇ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಲವರು ಬೇಜಾರಲ್ಲಿ ಸಮಯ ಕಳೆದರೆ, ಇನ್ನೂ ಹಲವರು ತಮ್ಮ ಮುಂದಿನ ಪ್ರಾಜೆಕ್ಟ್‍ಗೆ ಸಿದ್ಧತೆ ನಡೆಸಿದ್ದಾರೆ, ಇನ್ನೂ ಹಲವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಹೀಗೆ ಎಲ್ಲ ತಾರೆಯರು ತಮ್ಮದೇ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ನಟ ರಕ್ಷಿತ್ ಶೆಟ್ಟಿ ಸಹ ತಮ್ಮದೇ ಕಾರ್ಯದಲ್ಲಿ ತೊಡಗಿದ್ದು, ತಮ್ಮ ಹೊಸ ಅವತಾರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ತಮ್ಮ ಎರಡ್ಮೂರು ಸಿನಿಮಾಗಳ ಕಾರ್ಯದಲ್ಲಿ ತೊಡಗಿರುವ ಕುರಿತು ಮಾಹಿತಿ ನೀಡಿದ್ದ ರಕ್ಷಿತ್ ಶೆಟ್ಟಿ, ಇದೀಗ ತಮ್ಮ ಸ್ಥಿತಿ ಕುರಿತು ಫೋಟೋ ಹಾಕಿದ್ದಾರೆ. ರಕ್ಷಿತ್ ಶೆಟ್ಟಿ ತಾವೇ ನಿರ್ದೇಶಿಸುತ್ತಿರುವ ಪುಣ್ಯಕೋಟಿ ಚಿತ್ರದ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಕಾಡಿಗೆ ಸಹ ಹೋಗಿದ್ದರು. ಇದೀಗ ಹೋಮ್ ಕ್ವಾರಂಟೈನ್‍ನಲ್ಲಿದ್ದು, ಇದರ ನಡುವೆಯೇ ಸಿನಿಮಾ ಕಾರ್ಯಗಳನ್ನು ಮಾಡುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ತಮ್ಮ ಮೂವರು ರೂಮ್ ಮೇಟ್ಸ್ ಜೊತೆಗೆ ಬೆಂಗಳೂರಿನ ಮನೆಯಲ್ಲಿ ಬ್ಯಾಚ್ಯುಲರ್ ಲೈಫ್ ಕಳೆಯುತ್ತಿದ್ದಾರೆ. ಈ ಮಧ್ಯೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿದ್ದಾರೆ. ಕಥೆಗಳನ್ನು ಬರೆಯುವುದು, ಜೊತೆಗೆ ಚಾರ್ಲಿ ಸಿನಿಮಾದ ಕೆಲಸಗಳನ್ನು ಸಹ ಮಾಡುವುದು, ಪುಸ್ತಕ ಓದುವುದು, ಕಥೆ ಬರೆಯುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಈ ಹಿಂದೆ ಲೈವ್‍ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು.
ಚಾರ್ಲಿ ಚಿತ್ರೀಕರಣವನ್ನು ಸದ್ಯಕ್ಕೆ ನಿಲ್ಲಿಸಿದ್ದು, ಯಾವಾಗ ಪ್ರಾರಂಭವಾಗುತ್ತದೆ ತಿಳಿದಿಲ್ಲ. ವಾತಾವರಣ ಸರಿಯಾಗಿದೆ ಎಂದು ಸರ್ಕಾರ ಹೇಳುವವರೆಗೆ ಚಿತ್ರೀಕರಣ ಪ್ರಾರಂಭಿಸುವುದಿಲ್ಲ. ಎಲ್ಲರೂ ಅವರ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದೇವೆ. ಕಿರಣ್ ರಾಜ್ ಅವರು ಚಾರ್ಲಿ ಸಿನಿಮಾದ ಫಸ್ಟ್ ಹಾಫ್‍ನ್ನು ಎಡಿಟ್ ಮಾಡಿ, ಬ್ಯಾಗ್ರೌಂಡ್ ಸ್ಕೋರ್ ಮಾಡುತ್ತಿದ್ದಾರೆ. ಡಬ್ಬಿಂಗ್ ಸಹ ಅರ್ಧ ಆಗಿದ್ದು, ಇನ್ನೂ ಅರ್ಧ ಬಾಕಿ ಇದೆ. ಇದೀಗ ಡಬ್ಬಿಂಗ್ ಮಾಡುವ ಹಾಗಿಲ್ಲ ಹೀಗಾಗಿ ಚಾರ್ಲಿ ಸಿನಿಮಾದ ಬ್ಯಾಗ್ರೌಂಡ್ ಸ್ಕೋರ್ ಕೆಲಸವನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದ್ದರು.
ಹೇಮಂತ್ ರಾವ್ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗೆ ಕಥೆ ಬರೆಯುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಸಿನಿಮಾ ಆಗಿದ್ದು, ಒಳ್ಳೆಯ ಚಿತ್ರ ಆಗಲಿದೆ ಎಂದು ಭರವಸೆ ನೀಡಿದ್ದಾರೆ. ಚಾರ್ಲಿ, ನಂತರ ಪುಣ್ಯಕೋಟಿ ಮಾಡುವ ಕುರಿತು ಯೋಚನೆ ಇದೆ. ಈ ಸಿನಿಮಾಗಳ ಕುರಿತು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದರು. ಅಲ್ಲದೆ ಪುಣ್ಯಕೋಟಿ ಕಥೆಗೆ ಪೂರಕವಾಗುವಂಥ ಪುಸ್ತಕಗಳನ್ನು ಓದುತ್ತಿರುವುದಾಗಿ ತಿಳಿಸಿದ್ದರು.
ಇದೀಗ ಇದ್ದಕ್ಕಿದ್ದಂತೆ ಗಡ್ಡಬಿಟ್ಟಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಹೇರ್ ಕಟಿಂಗ್ ಸಲೂನ್ ತೆರೆದಿಲ್ಲ. ಅಲ್ಲದೆ ಸಿನಿಮಾಗಳ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಇದೇ ಚಿತ್ರಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‍ಗೆ ಹ್ಯಾಶ್ ಟ್ಯಾಗ್‍ನೊಂದಿಗೆ ಲಾಕ್‍ಡೌನ್ ಎಫೆಕ್ಟ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿ, ಇದು ನಿಮ್ಮ ಮುಂದಿನ ಚಿತ್ರದ ಓಪನಿಂಗ್ ಸೀನ್ ಲುಕ್ ಅನ್ಸುತ್ತೆ ಎಂದು ಕಮೆಂಟ್ ಮಾಡಿದ್ದಾರೆ.