ಚಿಕ್ಕಬಳ್ಳಾಪುರ: ಮದ್ಯದ ಅಮಲಿನಲ್ಲಿ ಸಹೋದರರ ನಡುವೆ ಜಗಳ ನಡೆದಿದ್ದು, ಕೋಪದ ಕೈಗೆ ಬುದ್ಧಿ ಕೊಟ್ಟ ಅಣ್ಣ, ತಮ್ಮನ ಕೈಯನ್ನೇ ತುಂಡರಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ರಮಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಗಳಾದ 38 ವರ್ಷದ ಕೃಷ್ಣಪ್ಪ ಹಾಗೂ ತಮ್ಮ 33 ವರ್ಷದ ಹನುಮಂತರಾಯಪ್ಪ ಇಬ್ಬರು ಸಹೋದರರು. ಇಂದು ಮದ್ಯ ಸೇವಿಸಿ ಬಳಿಕ ಇಬ್ಬರು ಮನೆಯಲ್ಲಿ ಊಟ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ತಟ್ಟೆ ತೊಳೆಯುವ ವಿಚಾರಕ್ಕೆ ಜಗಳ ಆರಂಭವಾಗಿದ್ದೆ. ಮದ್ಯದ ಮತ್ತಿನಲ್ಲಿದ್ದ ಕಾರಣ ಜಗಳ ವಿಕೋಪಕ್ಕೆ ದಾರಿ ಮಾಡಿಕೊಟ್ಟಿದ್ದು, ತಮ್ಮನತ್ತ ಅಣ್ಣ ಮಚ್ಚು ಬೀಸಿದ್ದಾನೆ. ಅಣ್ಣ ಬೀಸಿದ ಮಚ್ಚಿನೇಟಿನಿಂದ ಪಾರಾಗಲು ಯತ್ನಿಸಿದ ತಮ್ಮ ಹನುಮಂತರಾಯಪ್ಪ ತನ್ನ ಎಡಗೈ ಅಡ್ಡ ಇಟ್ಡಿದ್ದು, ಪರಿಣಾಮ ಆತನ ಕೈ ಸಂಪೂರ್ಣ ಕಟ್ ಆಗಿ ನೆಲಕ್ಕೆ ಬಿದ್ದಿದೆ.
ಗಾಯಾಳುವಿಗೆ ಗೌರಿಬಿದನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ನಂತರ ಕೃಷ್ಣಪ್ಪ ಸ್ಥಳದಿಂದ ಪರಾರಿಯಾಗಿದ್ದು, ಮಾಹಿತಿ ಪಡೆದಿರುವ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಬರೋಬ್ಬರಿ 41 ದಿನಗಳ ಬಳಿಕ ಸರ್ಕಾರ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿತ್ತು. ಆ ಬಳಿಕ ಅಪಘಾತ, ಹಲ್ಲೆ ಪ್ರಕರಣಗಳು ಹೆಚ್ಚು ವರದಿಯಾಗಿದೆ. ಘಟನೆಯಲ್ಲಿ ಹನುಮಂತರಾಯಪ್ಪ, ಕೃಷ್ಣಪ್ಪ ಇಬ್ಬರು ಮದ್ಯವ್ಯಸನಿಗಳಾಗಿದ್ದು, ಇವರ ಕಿರುಕುಳ ತಾಳಲಾರದೆ ಹೆಂಡತಿಯರು ಸಹ ಇವರನ್ನು ತೊರೆದಿದ್ದರು. ಸಣ್ಣ ಪುಟ್ಟ ವಿಚಾರಗಳಿಗೂ ಇಬ್ಬರು ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.