ಚಿಕ್ಕೋಡಿ: ತಾಲ್ಲೂಕಿನ ಯಕ್ಸಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರತ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಅವರಿಗೆ ಮನವಿ ಸಲ್ಲಿಸಿದರು.
ಯಕ್ಸಂಬಾದ ಸಮೂದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಪೂಗತ್ಯಾನಟ್ಟಿ ಇವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಬಂದ ಶಮನೇವಾಡಿಯ ಸಂಜೀವಕುಮಾರ ಜಯಪಾಲ ಬನವಣಿ ಇತನು ಕೈಗೆ ಗಾಯ ಮಾಡಿಕೊಂಡು ಬಂದು ಕರ್ತವ್ಯದಲ್ಲಿರುವ ವೈದ್ಯರು ಮತ್ತು ಶುಶ್ರೂಷಕಿಯಾದ ದೀಪಾ ಕಟ್ಟಿಮನಿ ಹಾಗೂ ಇತರೆ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಆಸ್ಪತ್ರೆಯ ಉಪಕರಣಗಳು ಮತ್ತು ಔಷಧಿಗಳನ್ನು ನಾಶಮಾಡಿದ್ದಾನೆ. ಆದ್ದರಿಂದ ಕೂಡಲೇ ಇತನ ಮೇಲೆ ಕಾನೂನು ರೀತಿ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಇಂತಹ ಘಟನೆಗಳಿಂದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಲು ಭಯಪಡುವಂತಾಗಿದೆ. ಇದರಿಂದ ಸಾರ್ವಜನಿಕರಿಗೆ ಕೊವಿಡ್-೧೯ ಸೇವೆಯನ್ನು ಒದಗಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ವೈದ್ಯರ ಮೇಲೆ ಹಲ್ಲೇ ನಡೆಸಿದ ವ್ಯಕ್ತಿಯ ಮೇಲೆ ಕ್ರಮ ಜರುಗಿಸುವ ಜತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ರಕ್ಷಣೆ ನೀಡುವ ಮೂಲಕ ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಮೂಡಿರುವ ಭಯ ಹೋಗಲಾಡಿಸಬೇಕು. ಇನ್ನಷ್ಟು ಉತ್ತಮ ಆರೋಗ್ಯ ಸೇವೆ ನೀಡಲು ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಎಡಿಎಚ್‌ಓ ಡಾ. ಶೈಲಜಾ ತಮ್ಮಣ್ಣವರ, ಟಿಎಚ್‌ಓ ಡಾ. ವಿ.ವಿ.ಶಿಂಧೆ, ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಸಂತೋಷ ಕೊಣ್ಣೂರೆ, ಡಾ. ಮಲ್ಲಿಕಾರ್ಜುನ ಪೂಗತ್ಯಾನಟ್ಟಿ, ಡಾ. ವಿಶಾಲ ಹಡಪದ, ಡಾ. ಲಕ್ಷ್ಮಿಕಾಂತ ಕಡ್ಲೇಪ್ಪಗೋಳ, ಡಾ. ಸಂತೋಷ ಪತ್ತಾರ, ಡಾ. ಜ್ಯೋತಿ ಚಿತಳೆ, ಬಿ.ಎ.ಕುಂಬಾರ, ಬಿ.ವೈ.ನಾಯ್ಕರ, ಸಂಜು ಕುಲಕರ್ಣಿ, ಸಿ.ಐ.ಕಲಾದಗಿಮಠ, ಕೆ.ಆರ್.ಕಾಂಬಳೆ, ಶ್ರೀನಿವಾಸ ನಾಯಿಕ, ಸೋಮನಾಥ ಪೂಜೇರಿ, ಜೆ.ವೈ.ಹುಲಕುಂದ, ಕುಮಾರ ಚೌಗಲಾ, ಸಾಗರ ಹಿಂಗ್ಲಜೆ ಇತರರು ಇದ್ದರು.