ಬೆಂಗಳೂರು: ವಿಶ್ವ ಯೋಗದಿನದಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಂದೆ ವರನಟ ಡಾ.ರಾಜ್‍ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಇಂದು ಇಡೀ ವಿಶ್ವದಲ್ಲೇ ಯೋಗದಿನವನ್ನು ಆಚರಿಸಲಾಗುತ್ತಿದೆ. ಕೊರೊನಾ ಸೋಂಕಿನ ತೀವ್ರತೆ ಹೆಚ್ಚಿರುವ ಕಾರಣ ಮನೆಯಲ್ಲೇ ಯೋಗ ಡೇ ಮಾಡುವಂತೆ ಪ್ರಧಾನಿಯವರು ಕೂಡ ಕರೆಕೊಟ್ಟಿದ್ದಾರೆ. ವಿಶ್ವ ಯೋಗದಿನದ ಅಂಗವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅಪ್ಪು, ತಂದೆಯನ್ನು ನೆನಪಿಸಿಕೊಂಡಿದ್ದಾರೆ.
ಈ ವಿಚಾರವಾಗಿ ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಹಾಕಿರುವ ಅಪ್ಪು, ರಾಜ್‍ಕುಮಾರ್ ಅವರು ಯೋಗ ಮಾಡುತ್ತಿರುವ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅಣ್ಣಾವ್ರು ವಿವಿಧ ಬಗೆಯ ಯೋಗಾಸನಗಳನ್ನು ಮಾಡಿದ್ದಾರೆ. ಈ ಫೋಟೋಗಳಿಗೆ ಓಂಕಾರದ ಹಾಡನ್ನು ಹಿನ್ನೆಲೆ ಸಂಗೀತವಾನ್ನಾಗಿ ಮಾಡಿ ಪುನೀತ್ ವಿಡಿಯೋ ಮಾಡಿದ್ದಾರೆ. ಜೊತೆಗೆ ಹ್ಯಾಪಿ ಎಂದು ಬರೆದು ವಿಶ್ವ ಯೋಗ ದಿನ ಎಂಬ ಹ್ಯಾಷ್‍ಟ್ಯಾಗ್ ಬಳಸಿದ್ದಾರೆ.
ಡಾ. ರಾಜ್‍ಕುಮಾರ್ ಅವರು, ಒಳ್ಳೆಯ ಯೋಗಪಟು ಆಗಿದ್ದರು. ದಿನಕ್ಕೆ ಒಂದು ಬಾರಿ ಅವರು ಎಲ್ಲೇ ಇದ್ದರು ಯೋಗ ಮಾಡುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲ ಕೆಲವರು ಹೇಳಿದ್ದಾರೆ. ಇದರ ಜೊತೆಗೆ ಅಣ್ಣಾವ್ರು ಯೋಗದಲ್ಲೇ ಅತ್ಯಂತ ಕಷ್ಟಕರವಾದ ಯೋಗಾಸನಗಳನ್ನು ಸರಳವಾಗಿ ಮಾಡುತ್ತಿದ್ದರು. ಈ ಹಿಂದೆ ಪುನೀತ್ ಅವರೇ ರಾಜ್‍ಕುಮಾರ್ ಅವರು ನಾವು ಹುಡುಗರಾಗಿ ಮಾಡಲು ಕಷ್ಟಪಡುತ್ತಿದ್ದ ವ್ಯಾಯಾಮವನ್ನು ಅಪ್ಪಾಜಿ ಸುಲಭವಾಗಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಅಪ್ಪನ ಹಾದಿಯಲ್ಲಿ ಮಕ್ಕಳು
ಯೋಗ, ವ್ಯಾಯಾಮಗಳನ್ನು ತಪ್ಪದೇ ದಿನವೂ ಮಾಡುತ್ತಿದ್ದ ಅಣ್ಣಾವ್ರು, ಸಾಯುವ ದಿನದವರೆಗೂ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿದ್ದರು. ಅಂತೆಯೇ ಅಪ್ಪು ಕೂಡ ದಿನ ವ್ಯಾಯಾಮ ಮಾಡುತ್ತಾರೆ. ಈ ಮೂಲಕ 45ರ ವಯಸ್ಸಿನಲ್ಲೂ ಅಪ್ಪು ಕಾಲೇಜು ಯುವಕರನ್ನು ನಾಚಿಸುವಷ್ಟು ಫಿಟ್ ಆಗಿ ಇದ್ದಾರೆ. ಇತ್ತೀಚೆಗೆ ಅವರು ವರ್ಕೌಟ್ ಮಾಡಿದ್ದ ವಿಡಿಯೋಗಳನ್ನು ಹಂಚಿಕೊಂಡಿದ್ದು, ಅವು ಸಖತ್ ವೈರಲ್ ಆಗಿದ್ದವು.
ಅಪ್ಪುನಂತಯೇ ಶಿವಣ್ಣ ಕೂಡ ವ್ಯಾಯಾಮ ಯೋಗ ಮಾಡಿ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿದ್ದಾರೆ. ಶಿವಣ್ಣ ಈಗಲೂ ಕೂಡ ಯುವ ನಟರನ್ನು ನಾಚಿಸುವಂತೆ ಡ್ಯಾನ್ಸ್ ಮಾಡುತ್ತಾರೆ. 57ರ ವಯಸ್ಸಿನಲ್ಲೂ ಕಾಲೇಜು ಹುಡುಗನ ಪಾತ್ರ ಮಾಡುಷ್ಟು ಡ್ಯಾಶಿಂಗ್ ಆಗಿ ಇದ್ದಾರೆ. ಇತ್ತೀಚೆಗೆ ಶಿವಣ್ಣ ಕೂಡ ಅವರ ಮನೆಯಲ್ಲೇ ವ್ಯಾಯಾಮ ಮಾಡಿದ್ದ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು