ಜಕಾರ್ತಾ: ಇಡೀ ವಿಶ್ವವೇ ಕೊರೊನಾ ವೈರಸ್‍ಗೆ ಬೆಚ್ಚಿಬಿದ್ದಿದೆ. ಆದರೆ ಈ ನಡುವೆ ಇಂಡೋನೇಷ್ಯಾದ ರಕ್ಷಣಾ ಸಚಿವರು ಕೊರೊನಾ ವೈರಸ್ ಅನ್ನು ಪತ್ನಿಗೆ ಹೋಲಿಕೆ ಮಾಡಿ ಹೇಳಿಕೆಯೊಂದನ್ನು ನೀಡಿದ್ದಾರೆ. ಇದೀಗ ಇವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂಡೋನೇಷ್ಯಾದ ಸಚಿವ ಮೊಹಮ್ಮದ್ ಮಹಫೂದ್ ಎಂ.ಡಿ ಕೊರೊನಾ ವೈರಸ್ ಅನ್ನು ಪತ್ನಿಗೆ ಹೋಲಿಕೆ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಜಕಾರ್ತದ ಸ್ಥಳೀಯ ವಿಶ್ವವಿದ್ಯಾಲಯವೊಂದು ಆಯೋಜಿಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಎಡವಟ್ಟು ಹೇಳಿಕೆ ನೀಡಿದ್ದಾರೆ.
ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಕೊರೊನಾ ವೈರಸ್ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಮೀಮ್‍ವೊಂದನ್ನು ಪ್ರಸ್ತಾಪಿಸಿದ್ದರು. ಇದೀಗ ಆ ಮೀಮ್ ಟೀಕೆಗೆ ಕಾರಣವಾಗಿದೆ.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡುವ ವೇಳೆ ಕೊರೊನಾ ವೈರಸ್ ಕುರಿತಂತೆ ಮೊಹಮ್ಮದ್ ಮಹಫೂದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮೊದಲಿಗೆ ಕೊರೊನಾ ಸಂದರ್ಭದಲ್ಲಿ ನಾವು ನಮ್ಮ ಆರೋಗ್ಯದ ಕಡೆ ಗಮನ ಹರಿಸುತ್ತಲೇ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಒಂದು ದಿನ ನನ್ನ ಸಹೋದ್ಯೋಗಿವೊಬ್ಬರು ಮೀಮ್‍ವೊಂದನ್ನು ಕಳುಹಿಸಿದ್ದರು. “ಕೊರೊನಾ ನಿಮ್ಮ ಹೆಂಡತಿ ಇದ್ದಂತೆ. ಆರಂಭದಲ್ಲಿ ನೀವು ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತೀರಿ. ಆದರೆ ಅದನ್ನು ನಿಯಂತ್ರಿಸಲು ಸಾಧ್ಯವಾಗಲ್ಲ ಎಂದು ತಿಳಿದುಕೊಳ್ಳುತ್ತೀರಿ. ನಂತರ ಅದರ ಜೊತೆಯೇ ಬದುಕಲು ಕಲಿಯುತ್ತೀರಿ. ಅದೇ ರೀತಿ ಕೊರೊನಾ ವೈರಸ್ ಜೊತೆಗೂ ಬದುಕಬೇಕು ಎಂಬುದು ಮೀಮ್‍ನಲ್ಲಿತ್ತು” ಎಂದು ಹೇಳಿದ್ದರು.
https://youtu.be/OYEMtBeW6b0
ಸಚಿವ ಮೊಹಮ್ಮದ್ ಮಹಫೂದ್ ಈ ಹೇಳಿಕೆಯು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರು ಸಚಿವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಆದರೆ ಇದುವರೆಗೂ ಮಹಫೂದ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.