ಗೋಕಾಕ: ಅರಭಾಂವಿ ಮತಕ್ಷೇತ್ರದಲ್ಲಿ ತಲೆ ಎತ್ತಿದ ಹೈಟೆಕ್ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ (ಜಿಟಿಟಿಸಿ) ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಭಾನುವಾರ ಭೇಟಿ ನೀಡಿ, ಕಾಲೇಜು ಮೂಲಸೌಕರ್ಯ ಪರಿಶೀಲನೆ ನಡೆಸಿದರು.
ಈ ಹಿಂದೆ ಸತೀಶ ಜಾರಕಿಹೊಳಿ ಅವರು ಕೈಗಾರಿಕಾ ಮಂತ್ರಿಯಾಗಿದ್ದ ವೇಳೆ ಸುಮಾರು 20 ಕೋಟಿ ರೂ. ಅನುದಾನ ಕಲ್ಪಿಸಿ, ಅರಭಾಂವಿಯಲ್ಲಿ ಜಿಟಿಟಿಸಿ ತರಬೇತಿ ಕೇಂದ್ರಕ್ಕೆ ಸ್ಥಾಪನೆಗೆ ವಿಶೇಷ ಕಾಳಜಿವಹಿಸಿದ್ದರು. ಸದ್ಯ ಪ್ರಸಕ್ತ ವರ್ಷದಿಂದ ತರಬೇತಿ ಕೇಂದ್ರ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಕೇಂದ್ರಕ್ಕೆ ಭೇಟಿ ನೀಡಿ ಮೂಲ ಸೌಕರ್ಯಗಳ ಪರಿಶೀಲಿಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಟಿಟಿಸಿ ನಮ್ಮ ಕನಸಿನ ಯೋಜನೆಗಳಲ್ಲೊಂದಾಗಿದೆ. ಜಿಲ್ಲೆಗೊಂದು ಮಾತ್ರ ಜಿಟಿಟಿಸಿ ಕೇಂದ್ರ ಸೀಮಿತವಿದೆ. ಆದ್ರೆ ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾದರಿಂದ ಅರಂಭಾವಿಯಲ್ಲಿ ತರಬೇತಿ ಕೇಂದ್ರಕ್ಕೆ ಅನುಮತಿ ನೀಡಲಾಗಿದೆ. ತಾವು ಕೈಗಾರಿಕಾ ಮಂತ್ರಿಯಾಗಿದ್ದ ವೇಳೆ ಕೊಪ್ಪಳ, ಉಡುಪಿ ಸೇರಿ ರಾಜ್ಯದಲ್ಲಿ ಒಟ್ಟು 4 ಜಿಲ್ಲೆಗಳಲ್ಲಿ ಜಿಟಿಟಿಸಿ ಕೊಡುಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನಲ್ಲಿ 2 ಕೋರ್ಸ್ ಆರಂಭ:
ಅರಭಾಂವಿಯಲ್ಲಿ ಸುಮಾರು 10 ಎಕರೆ ಜಾಗದಲ್ಲಿ ಹೈಕೆಟ್ ಕೇಂದ್ರ ಸಜ್ಜಾಗಿದ್ದು, ಹಾಸ್ಟೆಲ್, ವರ್ಕ್ ಶಾಪ್, ಮಷಿನರಿ, ಕ್ಯಾಂಟೀನ್ ಸೇರಿ ಮೂಲಸೌಕರ್ಯ ಒಳಗೊಂಡ ಅತ್ಯುತ್ತಮ ಕೇಂದ್ರ ಇದಾಗಿದೆ. ಈ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಮುಂಬೈ, ಮತ್ತಿತರ ಕಡೆ ಹೋಗುವುದು ತಪ್ಪಲಿದೆ. ಮುಂದಿನ ತಿಂಗಳಿನಿಂದ ತರಬೇತಿ ಕೇಂದ್ರ ಕಾರ್ಯಾರಂಭ ಮಾಡಲಿದ್ದು, ಸದ್ಯ “ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ಸ್” ,” ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್” ಎರಡು ಕೋರ್ಸ್ ಗಳ ಆರಂಭಸಲಾಗುತ್ತಿದೆ. ಮುಂದಿನ ವರ್ಷದಲ್ಲಿ ಮತ್ತೆ ನಾಲ್ಕು ಕೋರ್ಸ್ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಪ್ರತಿ ಕೋರ್ಸ್ ನಲ್ಲಿ 60 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವಿಶೇಷವಾಗಿ ಯುವತಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗತ್ತೆ. ಕೋರ್ಸ್ ಮುಗಿದ ಬಳಿಕ ಕ್ಯಾಂಪಸ್ ಇಂಟರ್ ವ್ಯೂವ್ ನಡೆಯಲಿದ್ದು, ವಿದ್ಯಾರ್ಥಿಗಳು ಕೆಲಸಕ್ಕಾಗಿ ಅಲೆಯುವುದು ತಪ್ಪಲಿದೆ ಎಂದು ತಿಳಿಸಿದರು.
ಇಲ್ಲಿ ಕಟ್ಟಡ ಆರಂಭದಿಂದಲೂ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇವೆ. ಇಲಾಖೆ ಜತೆ ನಿರಂತರ ಸಂಪರ್ಕ ಹೊಂದಿದ್ದೇವೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಯೋಜನೆ ಮನೆ ಬಾಗಿಲಿಗೆ ಬಂದಿದ್ದು, ಬೆಳಗಾವಿ ಜಿಲ್ಲೆಯವರು ಇದರ ಲಾಭ ಪಡೆಯಬೇಕು. ಸ್ಥಳೀಯ ಶಾಸಕರೊಂದಿಗೂ ಚರ್ಚಿಸಿ ಅವಶ್ಯ ಸೌಕರ್ಯಗಳ ಕಲ್ಪಿಸಲು ಮುಂದಾಗುವೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಂಕರ ಬೆಳಗುಂದಿ, ರಿಯಾಜ್ ಚೌಗಲಾ, ರಾಜು ಧರಗಶೆಟ್ಟಿ, ಜಿಟಿಟಿಸಿ ಕೇಂದ್ರ ಪ್ರಾಚಾರ್ಯ, ಉಪನ್ಯಾಸಕರು, ಸಿಬ್ಬಂದಿ ವರ್ಗ ಮುಂತಾದವರು ಇದ್ದರು.