ತುಮಕೂರು: ಆರ್.ಆರ್.ನಗರ ಉಪ ಚುನಾವಣೆಗೆ ಪ್ರಾಮಾಣಿಕ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ ರವಿ ಪತ್ನಿಗೆ ಕುಸುಮಾಗೆ ಟಿಕೆಟ್ ನೀಡುತ್ತಾರೆಂಬ ವದಂತಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಡಿ.ಕೆ ರವಿ ಪತ್ನಿ ಕುಸುಮಾಗೆ ಟಿಕೆಟ್ ನೀಡುತ್ತಿರುವ ವಿಷಯ ತಿಳಿದ ರವಿ ಕುಟುಂಬದವರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ನನ್ನ ಮಗನ ಜೊತೆ ಅವಳೂ ಹೋಗಿಬಿಟ್ಲು ಅಂತಾ ತಿಳಿದುಕೊಂಡಿದ್ದೇನೆ ಎಂದು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲಿನಲ್ಲಿ ಡಿ.ಕೆ ರವಿ ತಾಯಿ ಗೌರಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ನನ್ನ ಮಗನಿಗೆ ಬಂದ ದುಡ್ಡಲ್ಲಿ ಒಂದು ರೂಪಾಯಿಯನ್ನೂ ನಮ್ಮ ಕಷ್ಟಕ್ಕೆ ಕೊಡಲಿಲ್ಲ. ನನ್ನ ಮಗನ ಹೆಸರು ಹೇಳಿಕೊಂಡು ಯಾಕೆ ಚುನಾವಣೆಗೆ ನಿಂತುಕೊಳ್ಳಬೇಕು. ಡಿ.ಕೆ ರವಿ ಸತ್ತಾಗ ಮಣ್ಣಲ್ಲಿ ಬಿಸಾಕಿ ಹೋದೋಳು ಇವತ್ತಿನವರೆಗೂ ಬಂದಿಲ್ಲ.ಹೀಗಾಗಿ ಡಿಕೆ ರವಿ ಹೆಂಡ್ತಿ ಅನ್ನುವ ಯೋಗ್ಯತೆಯನ್ನು 6 ವರ್ಷದಲ್ಲೇ ಕಳೆದುಕೊಂಡಳು ಎಂದು ಗೌರಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಕುಸುಮಾ ಚುನಾವಣೆಗೆ ನಿಂತುಕೊಂಡರೂ ಪರವಾಗಿಲ್ಲ, ನನ್ನ ಮಗನ ಹೆಸರು, ಫೋಟೋ ಬಳಸಿಕೊಳ್ಳಬಾರದು. ಫೋಟೋ ಬಳಸಿಕೊಂಡರೆ ನಾನೇ ಹುಡುಗರನ್ನು ಕರೆದುಕೊಂಡು ಹೋಗಿ ಬೆಂಕಿ ಹಚ್ಚಿಸ್ತೀನಿ ಎಂದು ಡಿ.ಕೆ ರವಿ ತಾಯಿ ಗೌರಮ್ಮ ಎಚ್ಚರಿಕೆ ನೀಡಿದ್ದಾರೆ.
ನಾನು ಕಷ್ಟಪಟ್ಟು ಮಗನನ್ನು ಓದ್ಸಿದ್ರೇ, ನನ್ನ ಮಗನ ದುಡ್ಡೆಲ್ಲಾ ನುಂಗಿ ನೀರು ಕುಡಿದ್ಲು. ನನ್ನ ಕಣ್ಣೆದುರೇ ಅವ್ರ ಅಪ್ಪ ಅಮ್ಮನೂ ನನ್ನ ಹಾಗೇ ಯಾವಾಗ್ ಆಗ್ತಾರೆ ಕಾಯ್ತಾ ಇದ್ದೀನಿ ಎಂದು ಕುಸುಮಾ ಹಾಗೂ ಆಕೆ ಪೋಷಕರ ವಿರುದ್ಧ ರವಿ ತಾಯಿ ಗೌರಮ್ಮ ವಾಗ್ದಾಳಿ ನಡೆಸಿದ್ದಾರೆ.