ಕೊಪ್ಪಳ: ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೂರ್ಖತನದ ಮಾತುಗಳನ್ನಾಡುತ್ತಿದ್ದು, ಅವರಿಗೆ ಯಾವುದೇ ನೋಟಿಸ್ ನೀಡದೆ ಪಕ್ಷದಿಂದ ಉಚ್ಛಾಟಿಸಲು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಮನವಿ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ಯತ್ನಾಳ್ ಹೇಳಿಕೆಯನ್ನು ರಾಜ್ಯದ ಯಾವೊಬ್ಬ ಬಿಜೆಪಿ ಕಾರ್ಯಕರ್ತ ಒಪ್ಪುವುದಿಲ್ಲ. ನಮ್ಮದು ಶಿಸ್ತಿನ ಪಕ್ಷ. ಅವರು ಹೀಗೆ ಪದೇಪದೆ ಬಾಯಿಗೆ ಬಂದಂತೆ ಮಾತನಾಡಿದರೆ, ಸೂಕ್ತ ಕ್ರಮ ಆಗೇ ಆಗುತ್ತದೆ ಎಂದು ಸುದ್ದಿಗಾರರಿಗೆ ಬುಧವಾರ ಹೇಳಿದರು.
ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದ್ದಾರೆ. ಅಂಥವರು ಪಕ್ಷದಲ್ಲಿ ಇರುವ ಅವಶ್ಯಕತೆಯಿಲ್ಲ.
ಯತ್ನಾಳ್ ಹೇಳಿಕೆಯಿಂದ ಕಾಂಗ್ರೆಸ್ ನಾಯಕರಿಗೆ ಸಂತೋಷ ಆಗಿರಬಹುದು. ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಬಿದ್ದರೆ ನಾವು ಜವಾಬ್ದಾರರಲ್ಲ ಎನ್ನುತ್ತಾರೆ. ಅವರಲ್ಲ, ಸೋನಿಯಾ ಗಾಂಧಿ ಸೇರಿ ಯಾರೇ ಬಂದರೂ ಬಿಜೆಪಿ ಸರ್ಕಾರ ಬೀಳಲ್ಲ ಎನ್ನುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದರು.
ಒಬ್ಬ ಯತ್ನಾಳ್ ಹೇಳಿಕೆಯಿಂದ ಯಾವ ಪರಿಣಾಮವೂ ಪಕ್ಷದ ಮೇಲೆ ಬೀರಲ್ಲ. ಪದೇಪದೆ ಈ ರೀತಿಯ ಯತ್ನಾಳ್ ಹೇಳಿಕೆಗಳಿಗೆ ಬೆಲೆ ನೀಡಲ್ಲ. ಈ ಕೂಡಲೇ ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಚಾಟಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.