ಮಂಡ್ಯ: ಹುಚ್ಚ ವೆಂಕಟ್‌ಗೆ ನಡು ಬೀದಿಯಲ್ಲಿ ಯುವಕರು ಥಳಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವೆಂಕಟ್ ಮೇಲೆ ಹಲ್ಲೆ ಮಾಡಿದ್ದ ಕಿಡಿಗೇಡಿಗಳು
ಜೂ 10 ರಂದು ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಹುಚ್ಚ ವೆಂಕಟ್ ಟೀ ಕುಡಿಯಲು ಹೋಗಿದ್ದರು. ಟೀ ಕುಡಿಯುವ ವೇಳೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವೆಂಕಟ್‌ರನ್ನು ಯುವಕರ ಗುಂಪೊಂದು ಕಿಚಾಯಿಸಿದೆ. ಈ ವೇಳೆ ಯುವಕನೊಬ್ಬನಿಗೆ ವೆಂಕಟ್ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮನಬಂದಂತೆ ವೆಂಕಟ್ ಮೇಲೆ ಹಲ್ಲೆ ನಡೆಸಿತ್ತು.
ಈ ಘಟನೆ ಸಂಬಂಧ ಟೀ ಅಂಗಡಿ ಮಾಲೀಕ ಅಕ್ರಂ ಪಾಷಾ ಮಂಡ್ಯ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಹಲ್ಲೆ ಮಾಡಿದ್ದ ಯುವಕರ ವಿರುದ್ಧ ಐಪಿಸಿ ಸೆಕ್ಷನ್ 504, 506 ಅಡಿ ಎಫ್‌ಐಆರ್ ದಾಖಲಿಸಿದ್ದಾರೆ. ಜೊತೆಗೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಎಸ್‌ಪಿಗೆ ಧನ್ಯವಾದ ತಿಳಿಸಿದ ಜಗ್ಗೇಶ್
ಇನ್ನು ಹುಚ್ಚ ವೆಂಕಟ್ ಮೇಲಿನ ಹಲ್ಲೆಗೆ ನಟ ದುನಿಯಾ ವಿಜಯ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವರು ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ವೆಂಕಟ್ ಮೇಲೆ ಕೈಮಾಡಿದವರ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಕ್ಕಾಗಿ ನಟ ಜಗ್ಗೇಶ್ ಮಂಡ್ಯ ಎಸ್‌ಪಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವ್ರು, ವೆಂಕಟ್ ಮೇಲೆ ಕೈಮಾಡಿದವರ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಕ್ಕಾಗಿ ಮಂಡ್ಯ ಎಸ್‌ಪಿ ಶೋಭಾ ಅವರಿಗೆ ಕಲಾಪ್ರೇಮಿಗಳು ಧನ್ಯವಾದ ಅರ್ಪಿಸಿ. ಸಹೃದಯಿ ದಕ್ಷ ಅಧಿಕಾರಿ ಸಹೋದರಿಗೆ ನನ್ನ ವೈಯಕ್ತಿಕ ಧನ್ಯವಾದ ಎಂದಿದ್ದಾರೆ.