ಹುಬ್ಬಳ್ಳಿ:ನಗರದ ಇಂದಿರಾ ಗಾಜಿನಮನೆ ಉದ್ಯಾನದಲ್ಲಿರುವ ಮಳೆ ನೀರು ಇಂಗು ಗುಂಡಿಗೆ ಇತ್ತೀಚೆಗೆ ಬಿದ್ದು ಮೃತಪಟ್ಟ ಬಾಲಕಿ ಕುಟುಂಬಕ್ಕೆ, ಸ್ಮಾರ್ಟ್ ಸಿಟಿ ವತಿಯಿಂದ ಗುರುವಾರ ₹1.5 ಲಕ್ಷ ಪರಿಹಾರ ನೀಡಲಾಗಿದೆ.
ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ನಗರದ ಐ.ಟಿ ಪಾರ್ಕ್ ಸಂಕೀರ್ಣದಲ್ಲಿರುವ ಸ್ಮಾರ್ಟ್ ಸಿಟಿ ಕಚೇರಿ ಎದುರು ಸಮತಾ ಸೇನಾ ಸೇರಿದೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಾಲಕಿ ಕುಟುಂಬದವರೊಂದಿಗೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಸ್ಥಳದಲ್ಲೇ ಕುಟುಂಬದ ಸದಸ್ಯರಿಗೆ ₹1.5 ಲಕ್ಷ ಪರಿಹಾರ ಮೊತ್ತದ ಚೆಕ್ ನೀಡಿದರು.
ಬಳಿಕ ಮಾತನಾಡಿ, ‘ಈಗ ತಾತ್ಕಾಲಿಕವಾಗಿ ಪರಿಹಾರ ನೀಡಲಾಗಿದೆ.
ಮತ್ತಷ್ಟು ಪರಿಹಾರ ನೀಡುವ ಕುರಿತು, ವಾರದೊಳಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಕುಟುಂಬದವರು ಮತ್ತು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಅಧಿಕಾರಿಗಳ ನಿರ್ಲಕ್ಷ್ಯವೇ ಬಾಲಕಿ ತ್ರಿಶಾ ಯರಂಗಳಿ ಸಾವಿಗೆ ಕಾರಣ. ಉದ್ಯಾನಕ್ಕೆ ಮಕ್ಕಳು ಆಟವಾಡಲು ಬರುತ್ತಾರೆ ಎಂದು ಗೊತ್ತಿದ್ದರೂ, ಇಂಗು ಗುಂಡಿಯ ಸುತ್ತ ಬೇಲಿ ಅಥವಾ ತಡೆಗೋಡೆ ನಿರ್ಮಿಸದೆ ಕಡೆಗಣಿಸಿದ್ದಾರೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲ. ಹಾಗಾಗಿ, ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು. ಒಂದು ವಾರದೊಳಗೆ ಉಳಿದ ಪರಿಹಾರ ಮೊತ್ತವನ್ನು ನೀಡದಿದ್ದರೆ, ಮತ್ತೆ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಾಲಕಿ ತಂದೆ ಪರಶುರಾಮ ಯರಂಗಳಿ, ಸಮತಾ ಸೇನಾ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ, ಚಂದ್ರು ಮುಶೆಪ್ಪನವರ, ಮಂಜುನಾಥ ಉಳ್ಳಿಕಾಶಿ, ಬಾಷಾ ಮಾಸನೂರ, ದೇವೇಂದ್ರಪ್ಪ ಇಟಗಿ, ರಾಘವೇಂದ್ರ ಹಾಲಹರವಿ, ಯಂಕಪ್ಪ ಛಲವಾದಿ, ಬಿ.ಎಸ್. ಹುಲ್ಯಾಳ, ಮಂಗಳೇಶ ಹುಲಕೇರಿ, ರವಿ ಕದಂ, ರೇವಣಸಿದ್ಧಪ್ಪ ಇದ್ದರು.