ಗದಗ: ಸುಮಾರು 22 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಕೊರೊನಾದಿಂದ ಮತ್ತೆ ತಾಯಿ ಮಡಲಿಗೆ ಸೇರಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ ನಡೆದಿದೆ. ಗೋಗೇರಿ ಗ್ರಾಮದ ಮಲಿಕ್‌ಸಾಬ ಬಾಗವಾನ ಎಂಬುವವರ ಮೂರನೇ ಮಗ ಆದಂ ಮಲಿಕ್‌ಸಾಬ ಬಾಗವಾನ ಮರಳಿ ಮನೆಗೆ ಬಂದಿದ್ದಾರೆ.
ಮಲಿಕ್‌ಸಾಬ ಹಾಗೂ ಬಡಿಮಾ ದಂಪತಿಗೆ ಒಟ್ಟು ನಾಲ್ವರು ಪುತ್ರರು, ಆರು ಜನ ಪುತ್ರಿಯರಿದ್ದಾರೆ. ಮನೆಯಲ್ಲಿನ ಆರ್ಥಿಕ ಸಮಸ್ಯೆ ಹಿನ್ನೆಲೆ ಆದಂ ಹೈಸ್ಕೂಲ್ ಮುಗಿಸಿದ ನಂತರ ಉದ್ಯೋಗಕ್ಕಾಗಿ ಅಣ್ಣನೊಂದಿಗೆ ಪುಣೆಗೆ ದುಡಿಯಲು ಹೋಗಿದ್ದರು. ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಆದಂ 1998ರಲ್ಲಿ ಗೆಳೆಯರೊಂದಿಗೆ ಮುಂಬೈಗೆ ಪ್ರವಾಸಕ್ಕೆ ಹೋದಾಗ ಕಾಣೆಯಾಗಿದ್ದರು. ಈ ವಿಚಾರ ತಿಳಿದ ಮನೆಯವರು ಸುಮಾರು 5 ರಿಂದ 6 ವರ್ಷಗಳ ಕಾಲ ಮುಂಬಯಿ ಹಾಗೂ ಪುಣೆ ಸೇರಿದಂತೆ ಎಲ್ಲಾ ಕಡೆ ಹುಡುಕಾಡಿದ್ದಾರೆ.
ಅಂದಿನಿಂದ ಇಂದಿನವರೆಗೂ ತಾಯಿ ಬಡಿಮಾ ಮಗನ ಬರುವಿಕೆಗಾಗಿ ಕಾಯುತ್ತ ಕುಳಿತಿದ್ದರು. ಅಲ್ಲದೇ ಕಳೆದ ಆರು ತಿಂಗಳ ಹಿಂದೆ ಜಮೀನು ಹಂಚಿಕೆ ವೇಳೆ ಆದಂ ಬರ್ತಾನೆ ಅವನಿಗೂ ಆಸ್ತಿ ಪಾಲು ಕೊಡಬೇಕು ಎಂದಿದ್ದರಂತೆ. ಕೊನೆಗೂ ಈ ತಾಯಿಯ ಭರವಸೆ ಸುಳ್ಳಾಗಲಿಲ್ಲ.
ಸುಟ್ಟ ಕಲೆಗಳ ನೋಡಿ ಮಗನನ್ನು ಗುರುತಿಸಿದ ಮನೆಯವರು
ಮಹಾರಾಷ್ಟ್ರದ ಸೊಲ್ಲಾಪುರದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಆದಂ ಕೊರೊನಾದಿಂದ ಕೆಲಸ ಕಳೆದುಕೊಂಡು ಅಲೆದಾಡಿ, ಹಲವು ಕಷ್ಟಗಳನ್ನ ಅನುಭವಿಸಿ ಬಳಿಕ ಅಪ್ಪ ಅಮ್ಮ ನೆನಪಾಗಿ ಊರಿಗೆ ಮರಳಿದ್ದಾರೆ. ಎರಡು ದಶಕಗಳ ಬಳಿಕ ಬಂದ ಮಗನನ್ನು ನೋಡಿದ ತಂದೆ-ತಾಯಿಗಳಿಗೆ ಎಲ್ಲಿಲ್ಲದ ಸಂತೋಷವಾಗಿದೆ. ಆದಂ ಚಿಕ್ಕವರಿದ್ದಾಗ ಕಾಮಾಲೆ ರೋಗ ಬಂದಾಗ ಕೈಗಳಿಗೆ ಬಳ್ಳಿ ಹಾಕಿಸಿದ್ದ ಸುಟ್ಟ ಕಲೆಗಳು ಹಾಗೂ ಬಲಗಾಲಿನ ಒಂದು ಬೆರಳು ಮೇಲಿರುವುದು ಮನೆಗೆ ಬಂದ ಮಗನನ್ನು ಗುರುತಿಸಲು ಸಹಾಯವಾಗಿದೆ ಎನ್ನಲಾಗಿದೆ.
ಆದಂ ಮನೆಯವರನ್ನು ಹುಡುಕಿ ಮೊದಲು ವಾಸವಿದ್ದ ಮನೆಗೆ ಬಂದಿದ್ದು, ಅಲ್ಲಿರುವ ಗ್ರಾಮಸ್ಥರನ್ನು ವಿಚಾರಿಸಿದ್ದಾರೆ. ನಂತರ ಅವರ ಅಣ್ಣನಿಗೆ ವಿಷಯ ತಿಳಿದು ಆದಂ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಇನ್ನು ಕೊರೊನಾ ಹಿನ್ನೆಲೆಯಲ್ಲಿ ಆತನನ್ನು ತೋಟದ ಮನೆಯಲ್ಲಿ ಕ್ವಾರಂಟೀನ್ ಮಾಡಲಾಗಿದೆ. ಸದ್ಯ ಆದಂ ಮನೆಗೆ ಬಂದಿರುವುದು ಮನೆಯಲ್ಲಿ ಹಬ್ಬದ ವಾತಾವರಣವಿದ್ದು, ಮನೆಯವರು ಆತನಿಗೆ ಮದುವೆ ಮಾಡಬೇಕೆಂಬ ಉತ್ಸಾಹದಲ್ಲಿದ್ದಾರೆ.
Laxmi News 24×7