ಅಹಮದಾಬಾದ್: ನವೀಕೃತ ಗೊಂಡಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂ ಭಾರತ-ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಸರಣಿಯ ಕೊನೆಯ 2 ಟೆಸ್ಟ್ ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗಿದೆ. ಮೂರನೇ ಟೆಸ್ಟ್ ಪಂದ್ಯವು ಹಗಲು- ರಾತ್ರಿ ನಡೆಯಲಿದ್ದು, ವೈಮಾನಿಕ ಚೆಂಡುಗಳನ್ನು ಗುರುತಿಸಲು ಸುಲಭವಾಗು ವಂತೆ, ನೆರಳನ್ನು ನಿವಾರಿಸಲು ಸ್ಟೇಡಿಯಂನಲ್ಲಿ ಹೊಸದಾಗಿ ಎಲ್‌ಇಡಿ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ.
ಕ್ರೀಡಾಂಗಣದಲ್ಲಿ 11 ಸೆಂಟರ್ ಸ್ಟ್ರಿಪ್‌ಗಳಿದ್ದು, ಇದು ಅನನ್ಯವಾದುದು. ಆಟಗಾರರಿಗೆ 4 ಡ್ರೆಸ್ಸಿಂಗ್ ಕೊಠಡಿಗಳನ್ನು ಹೊಂದಿರುವ ವಿಶ್ವದ ಏಕೈಕ ಕ್ರೀಡಾಂಗಣ ಇದಾಗಿದೆ. ಪ್ರತಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಇತರ ಸೌಕರ್ಯಗಳ ಜೊತೆಗೆ ಅತ್ಯಾ ಧುನಿಕ ಜಿಮ್ನಾಶಿಯಂ ಇದೆ. ಕ್ರೀಡಾಂ ಗಣದಲ್ಲಿ 50 ಡಿಲಕ್ಸ್ ಕೊಠಡಿಗಳು ಹಾಗೂ 5 ಸೂಟ್‌ಗಳೊಂದಿಗೆ ಕ್ಲಬ್ ಹೌಸ್ ಇದೆ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಅನಿಲ್ ಪಟೇಲ್ ಹೇಳಿದ್ದಾರೆ.ಮೊಟೆರಾ ಕ್ರೀಡಾಂಗಣವನ್ನು ಕಳೆದ ವರ್ಷ ವ್ಯಾಪಕವಾಗಿ ನವೀಕರಣಗೊಳಿಸಲಾಗಿದ್ದು, 1,10,000 ಆಸನ ಸಾಮರ್ಥ್ಯದೊಂದಿಗೆ ಇದು ಆಸ್ಟ್ರೇಲಿಯದ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕಿಂತಲೂ ದೊಡ್ಡದಾಗಿದೆ. ಗುಜರಾತ್ ಕ್ರಿಕೆಟ್ ಸಂಸ್ಥೆಯು ಮುಂದಿನ 2 ಟೆಸ್ಟ್ ಪಂದ್ಯಗಳಿಗೆ ಸುಮಾರು 55,000 ಟಿಕೆಟ್ ಮಾರಾಟ ಮಾಡಲು ನಿರ್ಧರಿಸಿದೆ. ಪ್ರಮುಖ ಮೈದಾನದಲ್ಲಿ 11 ಸೆಂಟರ್ ಪಿಚ್‌ಗಳನ್ನು ಹೊಂದಿರುವ, ಅಭ್ಯಾಸ ಹಾಗೂ ಸೆಂಟರ್ ಪಿಚ್‌ಗಾಗಿ ಒಂದೇ ಮಣ್ಣನ್ನು ಬಳಸಿರುವ ವಿಶ್ವದ ಏಕೈಕ ಸ್ಟೇಡಿಯಂ ಕೂಡಾ ಇದಾಗಿದೆ” ಎಂದು ಪಟೇಲ್ ಮಾಹಿತಿ ನೀಡಿದರು.