ಕನ್ನಡ ಚಿತ್ರರಂಗದಲ್ಲಿ ಎಂದೂ ಮರೆಯಲಾಗದ ಅನೇಕ ಅಪ್ರತಿಮ ಕಲಾವಿದರು ಸೇವೆ ಸಲ್ಲಿಸಿದ್ದಾರೆ. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಮುಂತಾದವರ ಕೊಡುಗೆ ಅಪಾರ. ಇಳಿ ವಯಸ್ಸಿನಲ್ಲೂ ಅವರೆಲ್ಲ ಬಣ್ಣ ಹಚ್ಚಿದ್ದರು. ಆದರೆ ಇನ್ನೂ ಕೆಲವು ತಾರೆಯರಿಗೆ ದೇವರು ಹೆಚ್ಚು ಆಯಸ್ಸು ನೀಡಿರಲಿಲ್ಲ. ಶಂಕರ್‌ನಾಗ್, ಕಲ್ಪನಾ, ಮಂಜುಳಾ, ಸೌಂದರ್ಯಾ ಸೇರಿದಂತೆ ಕೆಲವು ಕಲಾವಿದರು ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿ, ಅಷ್ಟೇ ಬೇಗ ಮರೆಯಾಗಿ ಬಿಟ್ಟರು. ಇಡೀ ಜೀವಮಾನದಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನೆಲ್ಲ ಬಹುಬೇಗನೆ ಮುಗಿಸಿ ಇಹಲೋಕ ತ್ಯಜಿಸಿದರು. ಅವರ ವೃತ್ತಿಬದುಕಿನ ವೇಗವೇ ಹಾಗಿತ್ತು. ಇದ್ದ ಸ್ವಲ್ಪ ವರ್ಷಗಳಲ್ಲಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಂಡ ಆ ತಾರೆಯರು ಚಂದನವನದ ಇತಿಹಾಸದ ಪುಟಗಳಲ್ಲಿ ಇಂದಿಗೂ ಮಿನುಗುತ್ತಲೇ ಇದ್ದಾರೆ. ಸಿನಿಪ್ರಿಯರು ಕೂಡ ಅವರನ್ನೆಲ್ಲ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಭೌತಿಕವಾಗಿ ಕಣ್ಮರೆಯಾಗಿ ದಶಕಗಳೇ ಕಳೆದಿದ್ದರೂ ಇಂದಿಗೂ ಅವರಿಗೆ ಅಭಿಮಾನಿಗಳಿದ್ದಾರೆ. ಅಷ್ಟಕ್ಕೂ ಆ ಸೂಪರ್‌ಸ್ಟಾರ್‌ಗಳ ಜೀವನ ಹೇಗೆ ಅಂತ್ಯವಾಯ್ತು? ಅವರ ಸಾವಿಗೆ ಕಾರಣ ಏನು? ಗಾಸಿಪ್ ಲೋಕದಲ್ಲಿ ಅವರ ಬಗ್ಗೆ ಹರಿದಾಡಿದ ಕಥೆಗಳೇನು? ಈ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ಇದೆ.
ಎವರ್‌ಗ್ರೀನ್ ಹೀರೋ ಶಂಕರ್‌ನಾಗ್
1978ರಲ್ಲಿ ಶಂಕರ್ ನಾಗ್ ಸಿನಿಮಾ ಪಯಣ ಆರಂಭಿಸಿದರು. ರಂಗಭೂಮಿಯ ಜೊತೆಗೆ ಅವರಿಗೆ ನಂಟು ಇತ್ತು. ನಟನಾಗಿ ಮಾತ್ರ ಉಳಿಯದೆ, ನಿರ್ದೇಶನದಲ್ಲೂ ತಮ್ಮ ಪ್ರತಿಭೆ ಏನು ಎಂಬುದನ್ನು ಅವರು ಸಾಬೀತು ಪಡಿಸಿದರು. ‘ಮಾಲ್ಗುಡಿ ಡೇಸ್’, ‘ಮಿಂಚಿನ ಓಟ’, ‘ಒಂದು ಮುತ್ತಿನ ಕಥೆ’, ‘ಆ್ಯಕ್ಸಿಡೆಂಟ್’ ಮುಂತಾದವು ಅವರ ನಿರ್ದೇಶನದ ಪ್ರತಿಭೆಗೆ ಹಿಡಿದ ಕನ್ನಡಿ. ದಾವಣಗೆರೆ ಬಳಿ ನಡೆದ ಕಾರು ಅಪಘಾತದಲ್ಲಿ ಅವರು ನಿಧನರಾದರು. ಆಗ ಅವರ ವಯಸ್ಸು ಕೇವಲ 36! ಅಷ್ಟರಲ್ಲಾಗಲೇ ಶಂಕರ್‌ನಾಗ್ ಇಡೀ ಕರ್ನಾಟಕದಲ್ಲಿ ಮನೆಮಾತಾಗಿದ್ದರು. ಸಿನಿಪ್ರೇಮಿಗಳ ಹೃದಯ ಗೆದ್ದಿದ್ದರು.
ಒಂದು ವೇಳೆ ಅವರು ಬದುಕಿದ್ದರೆ ಕನ್ನಡ ಚಿತ್ರರಂಗವನ್ನು ಬೇರೊಂದು ಎತ್ತರಕ್ಕೆ ಕೊಂಡೊಯ್ಯುತ್ತಿದ್ದರು. ಆಧುನಿಕ ತಂತ್ರಜ್ಞಾನದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಅದನ್ನೆಲ್ಲ ಚಿತ್ರರಂಗದ ಏಳಿಗೆಗಾಗಿ ಬಳಸಿಕೊಳ್ಳುವ ತುಡಿತ ಹೊಂದಿದ್ದರು. ಆದರೆ ಅದಕ್ಕೆಲ್ಲ ವಿಧಿ ಅವಕಾಶ ನೀಡಲಿಲ್ಲ. ಅದೇನೇ ಇರಲಿ, ಹೊಸ ತಲೆಮಾರಿನ ಆಟೋಚಾಲಕರ ಆಟೋಗಳ ಮೇಲೆ ಇಂದಿಗೂ ಅವರ ಫೋಟೋ ರಾರಾಜಿಸುತ್ತದೆ. ಅಭಿಮಾನಿಗಳ ಎದೆಯಲ್ಲಿ ಅವರು ಇಂದಿಗೂ ಜೀವಂತ ಎಂಬುದಕ್ಕೆ ಇದೇ ಸಾಕ್ಷಿ.
ಮರೆಯಲಾಗದ ಮಂಜುಳಾ
1970 ಮತ್ತು 80ರ ದಶಕದಲ್ಲಿ ಭಾರಿ ಜನಪ್ರಿಯತೆ ಪಡೆದ ನಟಿ ಮಂಜುಳಾ. ಇಂದಿಗೂ ಅನೇಕ ಹೀರೋಯಿನ್‌ಗಳಿಗೆ ಅವರೇ ಸ್ಫೂರ್ತಿ, ಮಾದರಿ. ಅಷ್ಟರಮಟ್ಟಿಗೆ ಅವರು ಆಗಲೇ ಹವಾ ಮಾಡಿದ್ದರು. ಕನ್ನಡ ಮಾತ್ರವಲ್ಲದೆ ತೆಲುಗು-ತಮಿಳಿನಲ್ಲೂ ಮಿಂಚಿದ್ದರು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್ ಮುಂತಾದವರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಒದಗಿಬಂತು. ದೇಹ ತೂಕದ ಕಾರಣಕ್ಕಾಗಿ ಅವರು ಸಿನಿಮಾಗಳಿಂದ ದೂರ ಉಳಿಯಬೇಕಾಯಿತು. ಅದೇ ಅವರಿಗೆ ಆರ್ಥಿಕವಾಗಿ ಪೆಟ್ಟು ನೀಡಿತು ಎಂಬ ಮಾತಿದೆ. ಕೇವಲ 35ನೇ ವಯಸ್ಸಿಗೆ ಅವರು ಇಹಲೋಕ ತ್ಯಜಿಸಿದರು. ಅವರ ಸಾವಿಗೆ ಸ್ಟವ್ ಸ್ಫೋಟ ಕಾರಣ ಎನ್ನಲಾಯಿತು. ಆದರೆ ಅದು ಆತ್ಮಹತ್ಯೆ ಎಂಬುದು ನಂತರದ ತನಿಖೆಯಿಂದ ಗೊತ್ತಾಯಿತು. ಹೀಗೆ ದುರಂತ ಅಂತ್ಯ ಕಂಡ ಮಂಜುಳಾಗೆ ಈಗಲೂ ಅಭಿಮಾನಿಗಳಿದ್ದಾರೆ.
ಕಲ್ಪನೆಗೂ ಮೀರಿದ ಪ್ರತಿಭೆ ಕಲ್ಪನಾ
ಮೂಲಕ ಆರಂಭವಾದ ಅವರ ಸಿನಿಮಾ ಜರ್ನಿ ತುಂಬ ಚೆನ್ನಾಗಿ ಸಾಗಿ ಬಂತು. ಪುಟ್ಟಣ್ಣ ಕಣಗಾಲ್ ರೀತಿಯ ನಿರ್ದೇಶಕರು, ಡಾ. ರಾಜ್‌ಕುಮಾರ್ ರೀತಿಯ ಸ್ಟಾರ್ ನಟರ ಜೊತೆ ಕೆಲಸ ಮಾಡುವ ಅವಕಾಶವನ್ನು ಅವರು ಚೆನ್ನಾಗಿ ಬಳಸಿಕೊಂಡರು. ತಮಿಳು, ತೆಲುಗು, ಮಲಯಾಳಂ ಇಂಡಸ್ಟ್ರಿಗಳಿಗೂ ಹೋಗಿಬಂದರು. ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡರು. ಆದರೆ ಕ್ರಮೇಣ ಅವರ ಅದೃಷ್ಟ ಕೈಕೊಟ್ಟಿತು. ಚಿತ್ರರಂಗದಲ್ಲಿ ಅವರ ಬ್ಯಾಡ್ ಟೈಮ್ ಶುರುವಾಯಿತು. ಎಲ್ಲದರ ಪರಿಣಾಮವಾಗಿ ಕೇವಲ 35ನೇ ವಯಸ್ಸಿನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರು. ಅವರ ಕೊನೇ ದಿನಗಳು ಮತ್ತು ಸಾವಿನ ಬಗ್ಗೆ ಅನೇಕ ಗಾಸಿಪ್‌ಗಳು ಈಗಲೂ ಹರಿದಾಡುತ್ತಿವೆ. ಆದರೆ ಅವುಗಳಿಗೆ ಉತ್ತರ ನೀಡಲು ಕಲ್ಪನಾ ಇಲ್ಲವಷ್ಟೇ.
ದುರಂತ ಅಂತ್ಯ ಕಂಡ ಸೌಂದರ್ಯಾ
20ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟು, ಸತತ 12 ವರ್ಷಗಳ ಕಾಲ ಬಹುಬೇಡಿಕೆಯ ನಟಿಯಾಗಿ ಮೆರೆದವರು ಸೌಂದರ್ಯಾ. ಕರುನಾಡಿನ ಈ ಚೆಲುವೆ ಕನ್ನಡಕ್ಕಿಂತಲೂ ಟಾಲಿವುಡ್‌ನಲ್ಲಿಯೇ ಹೆಚ್ಚು ಖ್ಯಾತಿ ಪಡೆದರು. ಎಲ್ಲ ರೀತಿಯ ಪಾತ್ರಗಳಿಗೂ ತಾವು ಸೈ ಎಂಬುದನ್ನು ಸಾಬೀತುಪಡಿಸಿದರು. ‘ದ್ವೀಪ’, ‘ಆಪ್ತಮಿತ್ರ’ ಮುಂತಾದ ಸಿನಿಮಾಗಳಲ್ಲಿನ ಅವರ ನಟನೆಯನ್ನು ಜನರು ಮರೆಯಲು ಸಾಧ್ಯವಿಲ್ಲ. ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡು ಮಿಂಚುತ್ತಿದ್ದ ಈ ಸುಂದರಿಗೆ ದೇವರು ಹೆಚ್ಚು ಆಯಸ್ಸು ನೀಡಲಿಲ್ಲ ಎಂಬುದು ವಿಪರ್ಯಾಸ. 2004ರಲ್ಲಿ ‘ಆಪ್ತಮಿತ್ರ’ ಸಿನಿಮಾ ತೆರೆಕಂಡ ಬಳಿಕವಂತೂ ಅವರ ಖ್ಯಾತಿ ಡಬಲ್ ಆಗಿತ್ತು. ಆದರೆ ಅದೇ ವರ್ಷ ಅವರು ವಿಮಾನ ಅಪಘಾತದಲ್ಲಿ ಮೃತರಾದರು! ಅವರ ಅಗಲಿಕೆಯಿಂದ ಕನ್ನಡಕ್ಕೆ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಯಿತು ಎಂದರೆ ಅತಿಶಯೋಕ್ತಿ ಅಲ್ಲ. ಅವರಿಗೆ ಸಾಟಿ ಆಗಬಲ್ಲ ಮತ್ತೊಬ್ಬ ನಟಿ ಮತ್ತೆ ಹುಟ್ಟಿ ಬರಲೇ ಇಲ್ಲ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಸೌಂದರ್ಯಾ ಮೃತರಾದಾಗ ಅವರ ವಯಸ್ಸು ಕೇವಲ 31.
ಸುಂದರಾಂಗ ಸುನಿಲ್ ಬಾಳಲ್ಲಿ ವಿಧಿಯಾಟ
ಕನ್ನಡ ಚಿತ್ರರಂಗದ ಸ್ಪುರದ್ರೂಪಿ ನಟರಲ್ಲಿ ಸುನಿಲ್ ಕೂಡ ಒಬ್ಬರು. 1989ರ ಸಮಯದಲ್ಲಿ ಚಿತ್ರರಂಗಕ್ಕೆ ಪ್ರವೇಶ ಪಡೆದರು. ಆದರೆ ಅವರಿಗೆ ಈ ಬಣ್ಣದ ಲೋಕದ ಋಣ ಇದ್ದಿದ್ದು ಕೆಲವೇ ವರ್ಷ ಮಾತ್ರ ಅನಿಸುತ್ತದೆ. ಇದ್ದ ಕಡಿಮೆ ಸಮಯದಲ್ಲಿ ಅವರು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲರಾಗಿದ್ದರು. ‘ಶ್ರುತಿ’, ‘ಬೆಳ್ಳಿ ಕಾಲುಂಗುರ’, ‘ಸಿಂಧೂರ ತಿಲಕ’ ಮುಂತಾದ ಚಿತ್ರಗಳಿಂದ ಅವರು ಗಮನ ಸೆಳೆದರು. ಅವರ ಮತ್ತು ಮಾಲಾಶ್ರೀ ಜೋಡಿಗೆ ಇಡೀ ಕರುನಾಡಿನ ಸಿನಿಪ್ರಿಯರು ಫಿದಾ ಆಗಿದ್ದರು. ಇನ್ನೇನು ಅವರ ಖ್ಯಾತಿ ಉತ್ತುಂಗಕ್ಕೆ ಏರುತ್ತಿದೆ ಎನ್ನುವಾಗಲೇ ಅವರ ಆಯಸ್ಸು ಅಂತ್ಯವಾಯಿತು. ಭೀಕರ ರಸ್ತೆ ಅಪಘಾತದಲ್ಲಿ ಅವರು ಕೊನೆಯುಸಿರೆಳೆದರು. ಆ ಆ್ಯಕ್ಸಿಡೆಂಟ್ ಸಂಭವಿಸಿದಾಗ ಸುನಿಲ್ ಜೊತೆಯಲ್ಲಿ ಮಾಲಾಶ್ರೀ ಕೂಡ ಇದ್ದರು. ಅಪಘಾತದಲ್ಲಿ ಮಾಲಾಶ್ರೀಗೆ ಗಾಯಗಳಾದವು. ಆದರೆ ಸುನೀಲ್ ಇಹಲೋಕವನ್ನೇ ತ್ಯಜಿಸಿದರು. ಈ ಘಟನೆ ನಡೆದಾಗ ಅವರಿಗೆ ಕೇವಲ 30ರ ಪ್ರಾಯ.