ಬೆಂಗಳೂರು : ರಾಜ್ಯದಲ್ಲಿ ಕಳೆದೊಂದು ವಾರದಿಂದ ಬೀಳುತ್ತಿರುವ ನಿರಂತರ ಮಳೆ ಇನ್ನೂ ನಾಲ್ಕು ದಿನ ಮುಂದುವರೆಯುವ ಸಾಧ್ಯತೆಗಳಿವೆ.ನಿನ್ನೆ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾದ ವರದಿಯಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಬೀದರ್, ಗುಲ್ಬರ್ಗ ಭಾಗದಲ್ಲಿ ಅಕ ಪ್ರಮಾಣದ ಮಳೆಯಾದ ವರದಿಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಮುಂಗಾರು ಮಳೆ ಮರಳುವಿಕೆ ಸಂದರ್ಭದಲ್ಲಿ ರಾಜ್ಯದಲ್ಲಿ ಉತ್ತಮ ಪ್ರಮಾಣದ ಮಳೆಯಾಗುತ್ತಿದೆ. ಕೆಲವೆಡೆ ಭಾರೀ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಸಾಧಾರಣ ಮಳೆಯಾದ ವರದಿಯಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ನಿನ್ನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರಿಂದ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಿದೆ.
ವಾಯುಭಾರ ಕುಸಿತ ಇಂದು ದುರ್ಬಲಗೊಂಡಿದೆಯಾದರೂ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದರು. ರಾಜ್ಯದ ಉತ್ತರ ಒಳನಾಡಿನಲ್ಲಿ ಹೆಚ್ಚಿನ ಪ್ರಮಾಣದ ಮಳೆ ಮುಂದುವರೆಯಲಿದೆ. ಆದರೆ, ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಇಲ್ಲವೆ ತುಂತುರು ಮಳೆಯಾಗಲಿದೆ.
ಅಲ್ಲದೆ, ಮತ್ತೊಂದು ವಾಯುಭಾರ ಕುಸಿತ ಅ.16ರಂದು ಬಂಗಾಳಕೊಲ್ಲಿಯಲ್ಲಿ ಉಂಟಾಗುವ ಸಂಭವವಿದೆ. ಆಗ ಮತ್ತೊಂದು ಸುತ್ತಿನ ಮಳೆ ರಾಜ್ಯದಲ್ಲಿ ಬೀಳಲಿದೆ. ಹವಾ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಇನ್ನೂ ನಾಲ್ಕುದಿನಗಳ ಕಾಳ ಮುಂದುವರೆಯುವ ಸಾಧ್ಯತೆಗಳಿವೆ.
ಈಗಾಗಲೇ ಅಕ ಮಳೆಯಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮುಂಗಾರು ಹಂಗಾಮಿನ ಬೆಳೆ ಹಾನಿಗೀಡಾಗಿದೆ. ಕೊಯ್ಲಿಗೆ ಬಂದಿದ್ದ ಫಸಲಿಗೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ತೊಂದರೆ ಉಂಟಾಗಲಿದೆ ಎಂದು ಹೇಳಿದರು.