Breaking News

ಮಹಾರಾಷ್ಟ್ರದಲ್ಲಿ ಮತ್ತೆ ಮುಂದುವರೆದ ಮಳೆಯ ಅಬ್ಬರ; ಬೆಳಗಾವಿ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಸ್ಥಿತಿ ಅತಂತ್ರ

Spread the love

ಬೆಳಗಾವಿ: ಮಹಾರಾಷ್ಟ್ರದಲ್ಲಿ ಮತ್ತೆ ಮಳೆ ಮುಂದುವರೆದಿದ್ದು, ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 60 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕೃಷ್ಣಾ ನದಿಯಲ್ಲಿ 3.70 ಲಕ್ಷ ಕ್ಯುಸೆಕ್ ಹೊರ ಹರಿವು ಉಂಟಾಗಿದೆ. ಈಗಾಗಲೇ‌ 105 ಟಿಎಂಸಿ ಸಾಮರ್ಥ್ಯದ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋಯ್ನಾ ಜಲಾಶಯ 90 ಟಿಎಂಸಿ ಭರ್ತಿಯಾಗಿದ್ದು, ಮಳೆ ಮುಂದುವರೆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಕೃಷ್ಣಾ ನದಿಗೆ ಬಿಡುವ ಸಾಧ್ಯತೆ ಇದೆ. ಇದರಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ ತೀರದಲ್ಲಿ ಸಾಕಷ್ಟು ಹಾನಿಯಾಗುವ ಭೀತಿ ಎದುರಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಸ್ಥಿತಿ ಇನ್ನೂ ಅತಂತ್ರ
ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯಾದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಬೇಕಾಬಿಟ್ಟಿ ಬಂದು, ಹೋದರು ಒಂದು ಪೈಸೆಯೂ ಪರಿಹಾರ ತುರ್ತಾಗಿ ನೀಡಲಿಲ್ಲ. ಯಡಿಯೂರಪ್ಪಗೆ ಜುಲೈ 25 ರಂದು ಬೆಳಗಾವಿ ಪ್ರವಾಸದ ವೇಳೆ ಅಂದಿನ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ 200 ಕೋಟಿ ಬಿಡುಗಡೆಗೆ ಒತ್ತಾಯಿಸಿದ್ದರು. ಇದೀಗ ಹೊಸದಾಗಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಒಂದು ಪೈಸೆಯೂ ಪರಿಹಾರ ಬಿಡುಗಡೆ ಇಲ್ಲ ಎಂದು ನೆರೆ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಖಾತೆಯಲ್ಲಿ ಕೇವಲ 90 ಕೋಟಿ ರೂಪಾಯಿ ಮಾತ್ರ ಇದ್ದು, ನೆರೆ ಸಂತ್ರಸ್ತರ ಸ್ಥಳಾಂತರ ಸೇರಿದಂತೆ ತುರ್ತು ಕೆಲಸಕ್ಕೂ ಈ ಹಣ ಸಾಲಲ್ಲ. ತಹಶಿಲ್ದಾರ ಅಕೌಂಟ್‌ಗಳಲ್ಲಿ ಕೇವಲ ಹತ್ತು ಲಕ್ಷ ಮಾತ್ರ ಇದ್ದು, ಯಾವುದಕ್ಕೆ ಬಳಕೆ ಮಾಡಿಕೊಳ್ಳಬೇಕು ಅನ್ನುವ ಗೊಂದಲದಲ್ಲಿ ತಹಶಿಲ್ದಾರರು ಇದ್ದಾರೆ. ಹೊಸ ಸಿಎಂ ಬರೀ ಸನ್ಮಾನ, ದೇವಸ್ಥಾನ ಓಡಾಟದಲ್ಲಿ ಬಿಜಿಯಾದರೆ ಬೆಳಗಾವಿ ನೆರೆ ಸಂತ್ರಸ್ತರ ನೋವು ಆಲಿಸುವವರು ಯಾರು? ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು ಅಷ್ಟೇ, ಇದರಿಂದ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ನೆರೆ ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಕೃಷ್ಣಾ ನದಿ‌ ತೀರದಲ್ಲಿ ಮುಂದುವರೆದ ಪ್ರವಾಹದ ಪರಿಸ್ಥಿತಿ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಕೃಷ್ಣಾ ನದಿ ನೀರಿನಿಂದ ಜಲಾವೃತವಾಗಿದೆ. ಗ್ರಾಮ ಜಲಾವೃತ ಹಿನ್ನಲೆ ಸ್ಥಳೀಯ ಬೋಟ್ನಲ್ಲಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಲೈಫ್ ಜಾಕೆಟ್ ಕೂಡ ಇಲ್ಲದೇ ಜೀವ ಭಯದಲ್ಲಿ ಬೋಟ್ನಲ್ಲಿ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ. ನದಿ ಇಂಗಳಗಾಂವ ಗ್ರಾಮದ ಇನ್ನೂರಕ್ಕೂ ಅಧಿಕ ಮನೆಗಳು ಜಲಾವೃತವಾಗಿದ್ದು, ಬಟ್ಟೆ ಹಾಗೂ ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೊಂಡು ಜನರು ಊರು ತೊರೆಯುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಸ್ಥಿತಿ ಅತಂತ್ರ

ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ
ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮ ಮುಳುಗಡೆಯಾಗಿದೆ. ಅಲ್ಲದೇ ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮವೂ ಮುಳುಗಡೆಯಾಗಿದ್ದು, ಗ್ರಾಮದ ಒಂದು ಭಾಗದಿಂದ ನೀರು ನುಗ್ಗಿ ಬಾವನಸೌದತ್ತಿಯಲ್ಲಿ 200 ಮನೆ ಹಾಗೂ ಅಂಕಲಿಯಲ್ಲಿ 150 ಮನೆ ಜಲಾವೃತವಾಗಿದೆ. ಹೀಗಾಗಿ ಕಾಳಜಿ‌ ಕೇಂದ್ರಕ್ಕೆ ನೆರೆ ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ. ಕೃಷ್ಣಾ ನದಿ ಪ್ರವಾಹದ ಭೀಕರ ದೃಶ್ಯ ಸದ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೃಷ್ಣಾ ನದಿಯಲ್ಲಿ ಏರುತ್ತಿದೆ ನೀರಿನ ಹೊರ ಹರಿವಿನ ಪ್ರಮಾಣ
ಕೃಷ್ಣಾ ನದಿಯಲ್ಲಿ ನೀರಿನ ಹೊರ ಹರಿವಿನ ಪ್ರಮಾಣ ಏರಿಕೆಯಾಗಿದ್ದು, ಚಿಂಚಲಿ ಗ್ರಾಮದಲ್ಲಿ ದರ್ಗಾ ಮತ್ತು ನೂರಾರು ವಿದ್ಯುತ್ ಕಂಬಗಳು ಮುಳುಗಡೆಯಾಗಿವೆ. ಆದರೆ ಇಲ್ಲಿವರೆಗೂ ಗ್ರಾಮಕ್ಕೆ ಯಾವುದೇ ಅಧಿಕಾರಿಗಳು‌ ಭೇಟಿ ನೀಡಿಲ್ಲ. ಹೀಗಾಗಿ ತಮ್ಮಷ್ಟಕ್ಕೇ ತಾವೇ ರಕ್ಷಣೆ ಮಾಡಿಕೊಂಡು ಗ್ರಾಮಸ್ಥರು ಜೀವನ ಮಾಡುತ್ತಿದ್ದಾರೆ.

ಯಾದಗಿರಿ: ನದಿ ನೀರು ಆವರಿಸಿಕೊಂಡು ಅಪಾರ ಪ್ರಮಾಣದ ಬೆಳೆ ಹಾನಿ
ಕೃಷ್ಣಾ ನದಿಗೆ ಬಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಅಪಾರ ಪ್ರಮಾಣದ ಜಮೀನುಗಳಿಗೆ ನೀರು ನುಗ್ಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಬಳಿ ಸಾವಿರಾರು ಎಕರೆ ಜಮೀನು ಜಲಾವೃತವಾಗಿದ್ದು, ನದಿ ನೀರು ಆವರಿಸಿಕೊಂಡಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬಸವಸಾಗರ ಡ್ಯಾಂನಿಂದ ಕೃಷ್ಣಾ ನದಿಗೆ 4.20 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡುಗಡೆ ಮಾಡಿದ್ದು, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿ ಪ್ರವಾಹ ಭೀತಿ ಎದುರಾಗಿದೆ.

ನದಿ ನೀರಿನಿಂದ‌ ಜಲಾವೃತಗೊಂಡ ಸಾವಿರಾರು ಎಕರೆ ಜಮೀನು
ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಬಳಿ ಜಮೀನುಗಳಿಗೆ ಕೃಷ್ಣಾ ನದಿ ನೀರು ನುಗ್ಗಿದೆ. ನದಿಯಿಂದ‌ ಅರ್ಧ ಕಿ.ಮೀ ದೂರದ‌ ವರೆಗೆ ಆವರಿಸಿಕೊಂಡ‌ ನದಿ ನೀರಿನಿಂದಾಗಿ ಸಾವಿರಾರು ಎಕರೆ ಜಮೀನು ಕೆರೆಯಂತಾಗಿದೆ. ಪರಿಣಾಮ ಭತ್ತ ಹಾಗೂ ಹತ್ತಿ ಬಿತ್ತನೆ ಮಾಡಿದ್ದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಎಕರೆಗೆ 25 ರಿಂದ 30 ಸಾವಿರ ರೂ. ಖರ್ಚು ಮಾಡಿದ್ದ ರೈತರು ಸದ್ಯ ಆತಂಕಗೊಂಡಿದ್ದಾರೆ.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ