ಹುಬ್ಬಳ್ಳಿ: ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರನೂ ಆಗಿರುವ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿಯಾಗಿದೆ. ಜುಲೈ 30ರಂದು ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಜುಲೈ 30ರ ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿಯಲ್ಲಿ ಮಧು ಬಂಗಾರಪ್ಪ ಕೈ ಪಾಳಯಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಹುಬ್ಬಳ್ಳಿಯ ಗೋಕುಲ್ ಗಾರ್ಡನ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರ ಸಮ್ಮುಖದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ಗೆ ಸೇರ್ಪಡೆ ಆಗಲಿದ್ದಾರೆ. ಅಂದು ಕಾಂಗ್ರೆಸ್ ವಿಭಾಗೀಯ ಮಟ್ಟದ ಸಭೆ ಹಿನ್ನಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಇತ್ತೀಚೆಗಷ್ಟೇ ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪ ಮಾಡಿದ್ದರು. ಕೊಪ್ಪಳದಲ್ಲಿ ಹೇಳಿಕೆ ನೀಡಿರುವ ಅವರು, ಬಿಜೆಪಿಯವರು ಕೇವಲ ವ್ಯವಹಾರಕ್ಕಾಗಿ ಮಾತ್ರ ಬರುತ್ತಾರೆ. ನಂತರ ಇಡೀ ದೇಶ ಲೂಟಿ ಮಾಡಿ, ಹಾಳು ಮಾಡಿ ಹೋಗುತ್ತಾರೆ. ಇದು ನಮ್ಮೆಲ್ಲರ ದುರಂತ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ವ್ಯವಹಾರ ಮಾಡಿದಾಗ ಅದು ಕುದುರದೇ ಹೋದರೆ ವ್ಯವಹಾರ ಬಿದ್ದುಹೋಗುತ್ತದೆ. ಬಿಜೆಪಿ ಸದ್ಯ ಅದೇ ಪರಿಸ್ಥಿತಿಯಲ್ಲಿದೆ. ಅವರ ವ್ಯವಹಾರ ಕುದುರದ ಕಾರಣ, ಸರ್ಕಾರ ಬಿದ್ದು ಹೋಗುವ ಹಂತದಲ್ಲಿದೆ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದರು. ಸಾಮಾನ್ಯ ಜನರ ಸೇವೆ ಮಾಡುವುದು ಕಾಂಗ್ರೆಸ್ ಪಕ್ಷ. ಕರ್ನಾಟಕಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ. ಯಾವಾಗ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷವೇ ಅಧಿಕಾರ ಸ್ಥಾಪಿಸಲಿದೆ ಎಂದು ಅವರು ಹೇಳಿಕೆ ನೀಡಿದ್ದರು.