ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ನನ್ನ ಅಣ್ಣ, ಬೇಕಿದ್ದರೆ ಈ ಫೋಟೋ ನೋಡಿ. ನಾನು ಪ್ರಭಾವಿ ವ್ಯಕ್ತಿ. ಆಶ್ರಯ ಯೋಜನೆ ಅಡಿ ಮನೆ ಬೇಕಿದ್ದರೆ ಇಷ್ಟು ಲಕ್ಷ ರೂಪಾಯಿ ಕೊಡಿ, ಅಣ್ಣನ ಇನ್ಫ್ಲುಯೆನ್ಸ್ ಬಳಸಿ ಮನೆ ಕೊಡಿಸುವೆ ಎಂದ ಅರ್ಚಕನೊಬ್ಬ ದೇವಾಲಯಕ್ಕೆ ಬರುವ ಭಕ್ತರಿಗೆ ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಉತ್ತರಹಳ್ಳಿಯ ಅರ್ಚಕ ಮಹಾಬಲ ಅಲಿಯಾಸ್ ಮಂಜನಾಥ್ ವಂಚನೆ ಮಾಡಿದ ಆರೋಪಿ. ಉತ್ತರಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಇವರು, ದೂರು ದಾಖಲಾಗುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾರೆ.
ರವಿ ಚನ್ನಣ್ಣನವರ್ ತಮ್ಮ ಸಹೋದರ ಎಂದದ್ದೂ ಅಲ್ಲದೇ ಸೆಲಿಬ್ರಿಟಿಗಳ ಜತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತೋರಿಸಿ ತಾನು ಪ್ರಭಾವಿ ವ್ಯಕ್ತಿ ಎಂದು ಬಿಂಬಿಸಿಕೊಂಡಿದ್ದ. ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರಿಗೆ ಆಶ್ರಯ ಮನೆ ನೀಡುವುದಾಗಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾರೆ. ಉಚಿತ ಮನೆ ಸಿಗುತ್ತದೆ ಎಂದು 50 ಸಾವಿರದಿಂದ 1 ಲಕ್ಷ ರೂ. ವರೆಗೂ ವಸೂಲಿ ಮಾಡಿದ್ದಾನೆ. ಪರಿಚಿತರ ಮೂಲಕ ನಿಮಗೆ ತಪ್ಪದೇ ಮನೆ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸುತ್ತಿದ್ದ. ಅರ್ಚಕನ ಮಾತು ನಂಬಿ ದಾಖಲೆ ಕೊಟ್ಟವರು ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ. ಪ್ರಭಾವಿ ರಾಜಕಾರಣಿಗಳ ಜತೆಗಿರುವ ಫೋಟೋ ಕೂಡ ಇವರ ಬಳಿ ಇದೆ. ಅರ್ಚಕನಾಗಿದ್ದ ಕಾರಣ ಈತನನ್ನು ಸಾಕಷ್ಟು ಮಂದಿ ನಂಬಿದ್ದರು.
ಈ ವಿಚಾರವನ್ನು ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಗಮನಕ್ಕೆ ತಂದಾಗ ಅವನು ಯಾರೋ ನನಗೆ ಗೊತ್ತೇ ಇಲ್ಲ, ದೂರು ಕೊಟ್ಟು ಅರೆಸ್ಟ್ ಮಾಡಿಸಿ ಎಂದು ಸಲಹೆ ನೀಡಿದ್ದಾರೆ. ಅರ್ಚಕ ವಿರುದ್ಧ ವಂಚನೆ ದೂರು ದಾಖಲಾಗಿದ್ದು, ಇವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.