ಮಂಡ್ಯ: ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿರುವ ಹಿನ್ನೆಲೆ ಅವರ ಹುಟ್ಟೂರಾದ ಜಿಲ್ಲೆಯ ಬೂಕನಕೆರೆಯಲ್ಲಿ ಅಭಿಮಾನಿ ಕಣ್ಣೀರು ಹಾಕಿದ್ದಾರೆ.
ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯ ಮಧುಸೂದನ್ ಅವರು ಕಣ್ಣೀರು ಹಾಕಿದ್ದಾರೆ. ಯಡಿಯೂರಪ್ಪ ಅವರು ನಮ್ಮೂರಿನ ಮಗ ಎಂಬುವ ಹೆಮ್ಮೆ ನಮಗೆ ಇದೆ. ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ತಳಮಟ್ಟದಿಂದ ಕಟ್ಟಿದವರು ಯಡಿಯೂರಪ್ಪನವರು. ಅವರನ್ನು ಸಂಪೂರ್ಣ ಅವಧಿಯಲ್ಲಿ ಸಿಎಂ ಆಗಿ ನೋಡಬೇಕು ಎನ್ನುವ ಆಸೆ ನಮಗೆ ಇತ್ತು. ಇದೀಗ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿರುವುದು ಬೇಸರತಂದಿದೆ ಎಂದಿದ್ದಾರೆ.ರಾಜೀನಾಮೆಯಿಂದ ಬೂಕನಕೆರೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರದವರು ಒತ್ತಡ ಹಾಕಿ ರಾಜೀನಾಮೆ ತೆಗೆದುಕೊಂಡಿರುವುದು ಸರಿಯಲ್ಲ. ಬಿಜೆಪಿ ಹೆಸರು ಗೊತ್ತಿಲ್ಲ ಎನ್ನುವ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಪಕ್ಷ ಸಂಘಟನೆ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಅನ್ಯಾಯವಾಗಿರುವುದು ಖಂಡನೀಯ. ನಮ್ಮ ಮನೆ ದೇವರ ಮೇಲೆ ಆಣೆ ಯಡಿಯೂರಪ್ಪ ಅವರು ಇಲ್ಲ ಎಂದರೆ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗುತ್ತದೆ. ಬಿಜೆಪಿಯವರು ಯಡಿಯೂರಪ್ಪ ಅವರ ಋಣ ತೀರಿಸಲು ಅವರ ಮಗನಿಗಾದರು ಸಿಎಂ ಸ್ಥಾನ ನೀಡಬೇಕು ಎಂದರು.