ಬೆಂಗಳೂರು, ಜು. 25: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಳೆ ಜುಲೈ 26ಕ್ಕೆ ಎರಡು ವರ್ಷ ತುಂಬುತ್ತಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರದ ಸಿಎಂ, ಸಚಿವರು ಅಥವಾ ಬಿಜೆಪಿ ಶಾಸಕರಲ್ಲಿ ಆ ಸಂತೋಷ ಕಾಣುತ್ತಿಲ್ಲ. ಜೊತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ನಿರ್ಣಾಯಕ ದಿನ. ನಾಯಕತ್ವ ಬದಲಾವಣೆ ಕುರಿತು ಇಂದು ಬಿಜೆಪಿ ಹೈಕಮಾಂಡ್‌ನಿಂದ ಸೂಚನೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ವಲಯವಿದೆ. ಹೀಗಾಗಿ ನಾಳೆಯ ಎರಡು ವರ್ಷಗಳ ವರ್ಷಾಚರಣೆಯನ್ನೂ ಸಂಭ್ರಮಿಸುವ ಸ್ಥಿತಿಯೂ ಬಿಜೆಪಿಯಲ್ಲಿ ಕಂಡು ಬರುತ್ತಿಲ್ಲ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರು ಮೇಲಿಂದ ಮೇಲೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ನಿನ್ನೆಯಷ್ಟೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದಕ್ಕೂ ಮೊದಲು ದೆಹಲಿಯಲ್ಲಿ ಸಿಎಂ ಆಪ್ತ ಶಾಸಕ ರೇಣುಕಾಚಾರ್ಯ ಭೇಟಿ ಮಾಡಿ ಚರ್ಚೆ ಮಾಡಿದ್ದರು. ಇಂತಹ ರಾಜಕೀಯ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಯಾರೂ ಕೂಡ ಸುಖಾಸುಮ್ಮನೆ ಯಾರನ್ನೂ ಭೇಟಿ ಮಾಡುವುದಿಲ್ಲ. ಅದೂ ಹೈಕಮಾಂಡ್ ಸೂಚನೆ ಮೀರಿ ಶಾಸಕ ರೇಣುಕಾಚಾರ್ಯ ಅವರು ದೆಹಲಿಗೆ ಹೋಗುತ್ತಿರಲಿಲ್ಲ. ಸಿಎಂ ಯಡಿಯೂರಪ್ಪ ಅವರ ಮನಸ್ಸಿಗೆ ವಿರುದ್ಧವಾಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡುತ್ತಿರಲಿಲ್ಲ.
ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರು ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡುತ್ತಿರುವುದರ ಹಿಂದೆ ಬಹುದೊಡ್ಡ ಕಾರಣವಿದೆ. ಜೊತೆಗೆ ಹೊಸ ಮುಖ್ಯಮಂತ್ರಿ ನೇಮಕ ವಿಳಂಬ ಯಾಕೆ? ಮುಂದಿದೆ ಮಾಹಿತಿ!
ದೆಹಲಿಯಿಂದ ರಾಜ್ಯಕ್ಕೆ ಬಂದ ಪ್ರಲ್ಹಾದ್ ಜೋಶಿ
ದೆಹಲಿಯಲ್ಲಿ ಮಹತ್ವದ ಸಂಸತ್ ಅಧಿವೇಶನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅನೇಕ ಬೆಳವಣಿಗೆಗಳು ದೆಹಲಿಯಲ್ಲಿ ಆಗುತ್ತಿವೆ. ಯಾವುದೇ ಅಧಿವೇಶನದ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಿಗೆ ಮಹತ್ವದ ಜವಾಬ್ದಾರಿ ಇರುತ್ತದೆ. ಹೀಗಾಗಿ ಸಂಸದೀಯ ಸಚಿವರಾದವರು ತಮ್ಮ ರಾಜ್ಯಗಳಿಗೆ ತೆರಳದೇ ಆದಷ್ಟು ದೆಹಲಿಯಲ್ಲಿಯೇ ಉಳಿದುಕೊಳ್ಳುತ್ತಾರೆ. ಆದರೆ ಹಾಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಆಪ್ತ ಬಸವರಾಜ್ ಬೊಮ್ಮಾಯಿ ಅವರು ಪ್ರಲ್ಹಾದ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅವರು ನಿಜವಾಗಿಯೂ ಮಾತನಾಡಿದ್ದೇನು? ಮುಂದಿದೆ.
ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?
ಇಂದು ಹೈಕಮಾಂಡ್‌ನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜೀನಾಮೆ ಕುರಿತಂತೆ ಅಧಿಕೃತ ಸಂದೇಶ ಬರುತ್ತದೆ ಎಂಬ ಮಾಹಿತಿಯಿದೆ. ಬೆಳಗಾವಿಯಲ್ಲಿ ಮಾತಣಾಡಿರುವ ಸಿಎಂ ಯಡಿಯೂರಪ್ಪ ಅವರು, “ಸಂಜೆ ದೆಹಲಿಯಿಂದ ಸಂದೇಶ ಬರುತ್ತದೆ. ಆಗ ನಿಮಗೇ ಗೊತ್ತಾಗುತ್ತದೆ” ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ರಾಜಕೀಯ ಹೋಯ್ದಾಟಗಳೂ ಏನೆ ಇದ್ದರೂ ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಬಿಜೆಪಿ ಹೈಕಮಾಂಡ್ ಈಗಾಗಲೇ ನಿರ್ಧರಿಸಿ ಆಗಿದೆ.
ಹೀಗಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವ ಸಾಧ್ಯತೆಗಳು ಇಲ್ಲ. ಆದರಿಂದ ಮುಂದಿನ ಮುಖ್ಯಮಂತ್ರಿ ಯಾರು? ಎಂಬುದು ಇದೀಗ ಕುತೂಹಲ ಮೂಡಿಸಿದೆ. ಕುತೂಹಲ ತಣಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜ್ಯಕ್ಕೆ ಬಂದಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರೊಂದಿಗೆ ಒಡನಾಟ ಹೊಂದಿರುವ ಪ್ರಲ್ಹಾದ್ ಜೋಶಿ ಅವರೇ ಮುಂದಿನ ಸಿಎಂ ಎಂಬ ಮಾತುಗಳು ಬಿಜೆಪಿಯಲ್ಲಿ ದಟ್ಟವಾಗಿಯೆ. ಮುಂದಿನ ಸಿಎಂ ಯಾರುಬ ಎಂಬ ಸ್ಪಷ್ಟ ಮಾಹಿತಿ ಸಿಎಂ ಯಡಿಯೂರಪ್ಪ ಅವರಿಗೂ ಇದೆ. ಆದರಿಂದಲೇ ಆಪ್ತರ ಮೂಲಕ ಪ್ರಲ್ಹಾದ್ ಜೋಶಿ ಅವರಿಗೆ ಯಡಿಯೂರಪ್ಪ ಗೌಪ್ಯ ಸಂದೇಶ ಕಳುಹಿಸಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿಯೇ ಮೊದಲು ದೆಹಲಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಈಗ ಹುಬ್ಬಳ್ಳಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರುಗಳು ಜೋಶಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಾವಿ ಸಿಎಂಗೆ ಹಾಲಿ ಸಿಎಂ ಕಳುಹಿಸಿದ ಸಂದೇಶವೇನು?
ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಹಾಲಿ ಸಿಎಂ ಯಡಿಯೂರಪ್ಪ ಅವರಿಗೆ ಗೊತ್ತಾಗಿದೆ. ಹೈಕಮಾಂಡ್ ತೀರ್ಮಾನವನ್ನು ಒಪ್ಪಿಕೊಳ್ಳುವುದಾಗಿ ಯಡಿಯೂರಪ್ಪ ಅವರು ಆಪ್ತರ ಬಳಿಯೂ ಮಾತನಾಡಿಕೊಂಡಿದ್ದಾರಂತೆ. ಹೀಗಾಗಿ ಮುಂದೆ ರಾಜ್ಯದಲ್ಲಿ ಆಡಳಿತಕ್ಕೆ ಯಾವುದೇ ತಿಂದರೆ ಆಗದಂತೆ ಬೆಂಬಲ ಕೊಡುವುದೂ ಸೇರಿದಂತೆ ಆಡಳಿತಾತ್ಮಕವಾಗಿ ತೆಗೆದುಕೊಂಡಿರುವ ನಿರ್ಣಯಗಳ ಬಗ್ಗೆ ತಮ್ಮ ಆಪ್ತರ ಮೂಲಕ ಪ್ರಲ್ಹಾದ್ ಜೋಶಿ ಅವರಿಗೆ ಸಿಎಂ ಯಡಿಯೂರಪ್ಪ ಸಂದೇಶ ಕಳುಹಿಸಿದ್ದಾರೆ.
ಜೊತೆಗೆ ಮುಂದಿನ ಎರಡು ವರ್ಷಗಳ ಅವಧಿಗೆ ಯಾರೇ ಮುಖ್ಯಮಂತ್ರಿಯಾದರೂ ಯಡಿಯೂರಪ್ಪ ಅವರ ಬೆಂಬಲ ಅಗತ್ಯ. ಹೀಗಾಗಿ ಅತ್ಯಾಪ್ತರ ಮೂಲಕ ಮುಂದಿನ ಕಾರ್ಯಚಟುವಟಿಕೆಗಳನ್ನು ಸಿಎಂ ಯಡಿಯೂರಪ್ಪ ಅವರು ಈಗಲೇ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಸಂಸತ್ ಅಧಿವೇಶನ ನಡೆಯುತ್ತಿರುವಾಗ ಸಂಸದೀಯ ವ್ಯವಹಾಗರಳ ಸಚಿವರನ್ನು ಬದಲಾಯಿಸಬಹುದಾ ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೂ ಬಿಜೆಪಿ ಹೈಕಮಾಂಡ್ ಸಿದ್ಧತೆ ಮಾಡಿಕೊಂಡಿದೆ.
ಸಧ್ಯಕ್ಕಿಲ್ಲ ಮುಂದಿನ ಸಿಎಂ ನೇಮಕ?
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ಒಂದೊಮ್ಮೆ ರಾಜೀನಾಮೆ ಕೊಟ್ಟರೂ ಅದು ಸಧ್ಯ ಅಂಗೀಕಾರವಾಗುವುದಿಲ್ಲ. ಹಂಗಾಮಿ ಮುಖ್ಯಮಂತ್ರಿಗಳಾಗಿ ಅವರೇ ಮುಂದುವರೆಯುತ್ತಾರೆ. ಜುಲೈ 19ಕ್ಕೆ ಆರಂಭವಾಗಿರುವ ಸಂಸತ್ ಅಧಿವೇಶನ ಬರುವ ಆಗಸ್ಟ್ 13ಕ್ಕೆ ಮುಗಿಯಲಿದೆ. ಹೀಗಾಗಿ ಕರ್ನಾಟಕದ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮ ಆಗಸ್ಟ್ 15ರ ಬಳಿಕ ಆಗಲಿದೆ ಎಂಬ ಮಾಹಿತಿಗಳು ಬಿಜೆಪಿಯಲ್ಲಿ ಹರಿದಾಡುತ್ತಿವೆ.
ಇಂದು ಸಂಜೆ ರಾಜೀನಾಮೆ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚನೆ ಕಳುಹಿಸಬಹುದು. ಹಾಗೆ ಸೂಚನೆ ಕೊಟ್ಟಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಂದಿನ ಮುಖ್ಯಮಂತ್ರಿ ನೇಮಕವಾಗುವವರೆಗೆ ಹಂಗಾಮಿ ಸಿಎಂ ಆಗಿ ಮುಂದುವರೆಯುವಂತೆ ಸೂಚಿಸುತ್ತಾರೆ. ಅಷ್ಟರೊಳಗೆ ಆಷಾಢ ಮಾಸವೂ ಕಳೆತಯುತ್ತದೆ. ಸಿಎಂ ಯಡಿಯೂರಪ್ಪ ಅವರ ಬೇಡಿಕೆಯನ್ನೂ ಬಿಜೆಪಿ ಹೈಕಮಾಂಡ್ ಈಡೇರಿಸಿದಂತಾಗುತ್ತದೆ. ಈ ಎಲ್ಲ ಲೆಕ್ಕಾಚಾರಗಳು ಬಿಜೆಪಿಯಲ್ಲಿವೆ.
ಆದರೆ ಅಷ್ಟೊಂದು ಸುದೀರ್ಘ ಅವಧಿಗೆ ಹಂಗಾಮಿ ಸಿಎಂ ಮುಂದುವರೆಸುವುದು ಕಷ್ಟ ಎಂಬುದು ಹೈಕಮಾಂಡ್‌ಗೆ ಗೊತ್ತಿರದ ವಿಚಾರವಲ್ಲ. ಆದರೆ ಈ ಸಂದರ್ಭದಲ್ಲಿ ಬೇರೆ ಯಾವುದೇ ಪಕ್ಷಗಳು ಸರ್ಕಾರ ರಚನೆಗೆ ಮುಂದಾಗುವುದಿಲ್ಲ. ಅದಕ್ಕೆ ಬೇಕಾದ ಬಹುಮತವೂ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಕ್ಕಿಲ್ಲ. ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಪಕ್ಷ ತೊರೆಯುವುದು ಅಸಾಧ್ಯದ ಮಾತು. ಜೊತೆಗೆ ಹಂಗಾಮಿ ಮುಖ್ಯಮಂತ್ರಿಗಳು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶವಿಲ್ಲ. ಪ್ರಕೃತಿ ವಿಕೋಪ ಅಥವಾ ಆರೋಗ್ಯ ತುರ್ತು ಪರಿಸ್ಥಿಯಂತಹ ಸಂದರ್ಭದಲ್ಲಿ ಮಾತ್ರ ಹಂಗಾಮಿ ಸಿಎಂ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈಗಾಗಲೇ ಆ ಎರಡೂ ಪರಿಸ್ಥಿತಿಗಳು ರಾಜ್ಯದಲ್ಲಿವೆ. ಹೀಗಾಗಿ ಎಲ್ಲವನ್ನು ಅಳೆದು-ತೂಗಿ ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆಗಳಾಗುತ್ತಿವೆ.