Breaking News

ಮಳೆ ನಿಂತರೂ ಪ್ರವಾಹ ಭೀತಿ ಹೆಚ್ಚಳ

Spread the love

ಬೆಳಗಾವಿ: ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಶನಿವಾರ ಮಳೆ ಪ್ರಮಾಣ ತಗ್ಗಿದೆ. ನದಿಗಳಿಗೆ ಹೆಚ್ಚಿನ ನೀರು ಹರಿದುಬರುತ್ತಿರುವುದರಿಂದ ಮತ್ತು ಜಲಾಶಯಗಳಿಗೆ ಹೊರಹರಿವಿನ ಪ್ರಮಾಣ ಏರಿಕೆಯಾಗಿರುವ ಪರಿಣಾಮ ನದಿ ತೀರದ ಪ್ರವೇಶಗಳಲ್ಲಿ ಪ್ರವಾಹದ ಭೀತಿ ಜಾಸ್ತಿಯಾಗುತ್ತಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 2,24,435 ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 51,920 ಕ್ಯುಸೆಕ್‌ ಸೇರಿ 2,72,295 ಕ್ಯುಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬಂದು ಸೇರುತ್ತಿದೆ.

ದೂಧ್‌ಗಂಗಾ, ವೇದಗಂಗಾ ಮತ್ತು ಹಿರಣ್ಯಕೇಶಿ ನದಿಯಿಂದ ಬಾಧಿತರಾದವರನ್ನು ಸ್ಥಳಾಂತರಿಸುವ ಕಾರ್ಯ ನಡೆದಿದೆ.

ವೇದಗಂಗಾ ನದಿ ಉಕ್ಕಿ ಹರಿಯುತ್ತಿರುವುದರಿಂದಾಗಿ, ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಗ್ರಾಮದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತ ಸ್ಥಿತಿಯಲ್ಲೇ ಇದೆ. ಸಂಚಾರ ಬಂದ್ ಮಾಡಲಾಗಿದೆ. ಸಂಕೇಶ್ವರ ಪಟ್ಟಣದ ಬಳಿಯೂ ಈ ಹೆದ್ದಾರಿಯಲ್ಲಿ ನೀರು ತುಂಬಿದೆ.

ಖಾನಾಪುರ ತಾಲ್ಲೂಕಿನ ಲೋಂಡಾ ಸಮೀಪ ರಾಷ್ಟ್ರೀಯ ಹೆದ್ದಾರಿ-4ಎ ಸೇತುವೆ ಸಮೀಪ ರಸ್ತೆ ಕುಸಿದು ಬೆಳಗಾವಿ-ಉತ್ತರ ಕನ್ನಡ ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ.

ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಕಮತೆ ತೋಟದಲ್ಲಿ ಕೃಷ್ಣಾ ನದಿಯ ಪ್ರವಾಹದಿಂದ ನೀರು ಬಂದು ಸಾಜನೆ ಅವರ ಮನೆ ಜಲಾವೃತವಾಗಿದೆ. ಅಲ್ಲಿ ಸಿಲುಕಿದ್ದವರನ್ನು ಎನ್‌ಡಿಆರ್‌ಎಫ್ ತಂಡದವರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಜೆ.ಸದಾಶಿವ ಸಾಜನೆ, ಅಶ್ವಿನಿ ಸದಾಶಿವ ಸಾಜನೆ, ಚಂದ್ರ ಸಾಜನೆ ಮತ್ತು ಅನಿತಾ ಸಾಜನೆ ಅವರನ್ನು ಯಡೂರ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ಸದಲಗಾ ಗ್ರಾಮದಲ್ಲಿ ಸಿಲುಕಿದ್ದ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ನಿವಾಸಿಗಳನ್ನು ರಕ್ಷಿಸಲಾಗಿದೆ.

‘ಪುಣೆಯಿಂದ ಹುಬ್ಬಳ್ಳಿಗೆ ಚಿಕಿತ್ಸೆಗಾಗಿ ಬರುತ್ತಿದ್ದ ಕುಟುಂಬದವರನ್ನು ಯಮಗರ್ಭಿ ಬಳಿ ಬೋಟ್‌ನಲ್ಲಿ ಕರೆತಂದು ಬಳಿಕ ಆಂಬುಲೆನ್ಸ್‌ ಮೂಲಕ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಕೃಷ್ಣಾ ನದಿ ದಡದಲ್ಲಿರುವ ಯಡೂರ ಗ್ರಾಮದಲ್ಲಿ ವೃದ್ಧರು ಮತ್ತು ರೋಗಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಮಂಗೂರು ಜನವಸತಿಯಲ್ಲಿ ಸಿಲುಕಿದ್ದವರನ್ನು ಬೋಟ್‌ ಸಹಾಯದಿಂದ ಯಮಗರ್ಣಿಗೆ ಸಾಗಿಸಲಾಗಿದೆ. ಮುಳವಾಡದ ಜನರನ್ನು ಶಿರಗುಪ್ಪಿಗೆ ಕರೆತರಲಾಗುತ್ತಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.

ಚಿಕ್ಕೋಡಿ ಪಟ್ಟಣದ ಹೊರವಲಯದ ರಾಮನಗರ ಬಳಿ ರಭಸದಿಂದ ಹರಿಯುತ್ತಿದ್ದ ಹಳ್ಳದಲ್ಲಿ ಶುಕ್ರವಾರ ಕೊಚ್ಚಿ ಹೋಗಿದ್ದ ಬಾಲಕಿ ಕಿರಣ ಶಾನೂರ (12) ಶವವಾಗಿ ಶನಿವಾರ ಪತ್ತೆಯಾಗಿದ್ದಾಳೆ.

ಜಿಲ್ಲೆಯ ಗೋಕಾಕ ನಗರದಿಂದ ಗೋಕಾಕ ಜಲಪಾತದ ಕಡೆಗೆ ಹೋಗುವ ಮುಖ್ಯ ರಸ್ತೆ ಮಾರ್ಕಂಡೇಯ ನದಿ ಪ್ರವಾಹದಲ್ಲಿ ಶುಕ್ರವಾರ ತಡರಾತ್ರಿ ಸಂಪೂರ್ಣ ಮುಳುಗಿದೆ. ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ರಿದ್ಧಿ-ಸಿದ್ಧಿ ರಾಕೆಟ್ ಕಾರ್ಖಾನೆಗೆ ಗೋವಿನಜೋಳ ಸಾಗಿಸುವ ಲಾರಿಗಳು ಸೇರಿದಂತೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಮಲಪ್ರಭಾ ನದಿ ಪ್ರವಾಹದಿಂದ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನೀರು ಸಂಗ್ರಹವಾಗಿ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಶುಕ್ರವಾರವಿಡೀ ಸುರಿದ ಮಳೆಯಿಂದಾಗಿ ಸೇವಾ ರಸ್ತೆಯ ಅರ್ಧ ಕಿ.ಮೀ.ವರೆಗೆ ನೀರು ಬಂದಿದೆ. ಶನಿವಾರ ಬೆಳಿಗ್ಗೆಯಿಂದ ಮಳೆ ಪ್ರಮಾಣ ತಗ್ಗಿದ್ದರೂ, ನದಿಯಲ್ಲಿ ನೀರಿನ ಪ್ರಮಾಣ ಏರುತ್ತಲೇ ಇದೆ.


Spread the love

About Laxminews 24x7

Check Also

ಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ

Spread the loveಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೋಡಬೇಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ