ಆಲಮಟ್ಟಿ(ವಿಜಯಪುರ): ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಭಾರಿ ಮಳೆಯ ಸುರಿಯುತ್ತಿರುವ ಕಾರಣ, ಆಲಮಟ್ಟಿಗೆ ಅಪಾರ ಪ್ರಮಾಣದ ನೀರು ಹರಿದು ಬರುವ ನಿರೀಕ್ಷೆಯಿದೆ. ಹೀಗಾಗಿ ಜಲಾಶಯದಿಂದ 1.30 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಮುಂದಿನ ಎರಡು ದಿನದೊಳಗೆ ಜಲಾಶಯದ ಒಳಹರಿವು 1.5 ಲಕ್ಷ ಕ್ಯುಸೆಕ್ ದಾಟುವ ನಿರೀಕ್ಷೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಗುರುವಾರ ಬೆಳಿಗ್ಗೆಯಿಂದಲೇ ಹೊರಹರಿವು ಹೆಚ್ಚಿಸಲಾಗಿದೆ.
24 ಗೇಟ್ ಮೂಲಕ ನೀರು ಹೊರಕ್ಕೆ: ‘ಜಲಾಶಯದ 26 ಗೇಟ್‌ಗಳ ಪೈಕಿ 6 ಗೇಟ್‌ಗಳನ್ನು 1 ಮೀಟರ್, 18 ಗೇಟ್‌ಗಳನ್ನು 0.8 ಮೀಟರ್ ಹೆಚ್ಚಿಸಿ 88,000 ಕ್ಯುಸೆಕ್ ಹಾಗೂ ಜಲಾಶಯದ ಬಲಭಾಗದ ಕೆಪಿಸಿಎಲ್ ಮೂಲಕ 42,000 ಕ್ಯುಸೆಕ್ ನೀರನ್ನು ನದಿತಳ ಪಾತ್ರಕ್ಕೆ ಹರಿಸಲಾಗುತ್ತಿದೆ. ಇದು ಈ ವರ್ಷದ ಗರಿಷ್ಠ ಹೊರಹರಿವಾಗಿದೆ’ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.
‘ಪ್ರವಾಹ ಸ್ಥಿತಿ ಉಂಟಾಗದಂತೆ ಮಹಾರಾಷ್ಟ್ರದ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಮುಂದಿನ 36 ಗಂಟೆಯೊಳಗೆ ಜಲಾಶಯಕ್ಕೆ ಹರಿದು ಬರುವ ನೀರಿನ ಲೆಕ್ಕಾಚಾರ ನೋಡಿಕೊಂಡು ನೀರನ್ನು ಹೊರ ಬಿಡಲಾಗುತ್ತಿದೆ. ಗುರುವಾರ ಸಂಜೆ ಕಲ್ಲೋಲ ಬ್ಯಾರೇಜ್‌ನಲ್ಲಿ ಕೃಷ್ಣೆಯ ಹರಿವು 93,000 ಕ್ಯುಸೆಕ್ ಇದ್ದು, ಘಟಪ್ರಭಾದ ಹರಿವು 18,500 ಕ್ಯುಸೆಕ್ ಇದೆ. ಈ ನೀರು ಶುಕ್ರವಾರ ಆಲಮಟ್ಟಿಗೆ ತಲುಪಲಿದೆ. ಸದ್ಯ ಆಲಮಟ್ಟಿ ಜಲಾಶಯದ ಒಳಹರಿವು 88,287 ಕ್ಯುಸೆಕ್ ಇದೆ. 517.70 ಮೀ.ವರೆಗೆ ಮಾತ್ರ ನೀರು ಸಂಗ್ರಹಿಸಲಾಗಿದೆ’ ಎಂದರು.
ಮಹಾರಾಷ್ಟ್ರದ ಕೃಷ್ಣಾ ಕಣಿವೆಯ ಕೊಯ್ನಾ, ಧೋಮ, ಕನ್ಹೇರ, ದೂದಗಂಗಾ ಸೇರಿ ಬಹುತೇಕ ಜಲಾಶಯಗಳು ಶೇ 70ರಷ್ಟು ಭರ್ತಿಯಾಗಿವೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.
‘ಗುರುವಾರ ಕೊಯ್ನಾ ಜಲಾಶಯಕ್ಕೆ 1.79 ಲಕ್ಷ ಕ್ಯುಸೆಕ್ ಒಳಹರಿವು ಇದ್ದು, ಅದು ಶನಿವಾರದ ವೇಳೆಗೆ 3 ಲಕ್ಷ ಕ್ಯುಸೆಕ್ ಏರಿಕೆಯಾಗಲಿದೆ. ಆಗ ಅಪಾರ ಪ್ರಮಾಣದ ನೀರನ್ನು ಬಿಟ್ಟರೆ, ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ಉಂಟಾಗಬಹುದು’ ಎಂದು ಅಧಿಕಾರಿಗಳು ತಿಳಿಸಿದರು.
Laxmi News 24×7