Breaking News

ಯಡಿಯೂರಪ್ಪ ರಾಜೀನಾಮೆ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿತ್ತೆ?

Spread the love

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆಗೆ ಭಾರತೀಯ ಜನತಾ ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಆದರೆ, ಯಡಿಯೂರಪ್ಪ ತಮಗೆ ಕನಿಷ್ಟ ಒಂದು ತಿಂಗಳು ಕಾಲಾವಕಾಶ ನೀಡುವಂತೆ ಕೋರಿಕೊಂಡಿದ್ದಾರೆ!

ಹೌದು, ಇಂತಹದ್ದೊಂದು ಸುದ್ದಿ ಇವತ್ತು ಮಧ್ಯಾಹ್ನದಿಂದ ಭಾರೀ ಸದ್ದು ಮಾಡುತ್ತಿದೆ. ತಮ್ಮ ಪುತ್ರ ಬಿ ವೈ ವಿಜಯೇಂದ್ರ ಮತ್ತು ಆಪ್ತ ಲೇಹರ್ ಸಿಂಗ್ ಜೊತೆ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಮೊದಲ ದಿನ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಆ ಬಳಿಕ ಮಾರನೇ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ಆ ಬಳಿಕ ಅವರು ಬೆಂಗಳೂರಿಗೆ ವಾಪಸ್ಸಾಗಲು ದೆಹಲಿ ವಿಮಾನ ನಿಲ್ದಾಣದತ್ತ ಹೊರಟ್ಟಿದ್ದರು. ಅಷ್ಟರಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಬುಲಾವ್ ಬಂದಿತು. ಹಾಗಾಗಿ ಮಾರ್ಗಮಧ್ಯದಲ್ಲಿ ಮತ್ತೆ ವಾಪಸ್ಸಾಗಿ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬಳಿಕ ಬೆಂಗಳೂರು ಪ್ರಯಾಣ ಬೆಳೆಸಿದರು.

ಮೊದಲ ದಿನದ ಪ್ರಧಾನಿ ಮೋದಿ ಭೇಟಿ ಮತ್ತು ಶನಿವಾರ ಬೆಳಗಿನ ಜೆ ಪಿ ನಡ್ಡಾ ಮತ್ತು ರಾಜ್ ನಾಥ್ ಸಿಂಗ್ ಭೇಟಿಯವರೆಗೆ ತಮ್ಮ ನಾಯಕತ್ವ ಬದಲಾವಣೆಯ ಪ್ರಶ್ನೆಗಳಿಗೆ ಸಿಎಂ ಯಡಿಯೂರಪ್ಪ ನಗುತ್ತಲೇ ಪ್ರತಿಕ್ರಿಯಿಸಿ, ಅಂತಹ ಪ್ರಶ್ನೆ ತಮ್ಮ ಮಾತುಕತೆಯಲ್ಲಿ ಪ್ರಸ್ತಾಪವಾಗಿಲ್ಲ ಮತ್ತು ಅಂತಹ ವಿಷಯ ತಮಗೆ ಗೊತ್ತಿಲ್ಲ. ಗೊತ್ತಿದ್ದರೆ ನೀವೇ ಹೇಳಿ ಎಂದು ಮಾಧ್ಯಮದವರಿಗೇ ಮರುಪ್ರಶ್ನೆ ಹಾಕಿದ್ದರು. ಆದರೆ, ಯಾವಾಗ ಅಮಿತ್ ಶಾ ಭೇಟಿ ಮಾಡಿದರೋ ಆ ಬಳಿಕ ಯಡಿಯೂರಪ್ಪ ಪ್ರತಿಕ್ರಿಯೆಯ ದಾಟಿ ಬದಲಾಯಿತು. ಶಾ ಭೇಟಿಯ ವೇಳೆ ಪ್ರಮುಖವಾಗಿ ನಾಯಕತ್ವ ಬದಲಾವಣೆಯ ವಿಷಯವೇ ಪ್ರಸ್ತಾಪವಾಯಿತು.

ಶಾ ಅವರು ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದರು. ಆದರೆ, ಯಡಿಯೂರಪ್ಪ ರಾಜೀನಾಮೆಯ ಪ್ರಸ್ತಾಪಕ್ಕೆ ಅಸಮ್ಮತಿ ವ್ಯಕ್ತಪಡಿಸಿದರು. ಆದರೆ, ಶಾ, ಈಗಾಗಲೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ವಿಷಯ ಪಕ್ಷ ಮತ್ತು ಸಂಘಟನೆಗೆ ಸಾಕಷ್ಟು ಹಾನಿ ಮಾಡಿದೆ. ಚುನಾವಣೆ ಇನ್ನು ಎರಡು ವರ್ಷ ಉಳಿದಿರುವಾಗ ಇಂತಹ ಗೊಂದಲ ಮತ್ತು ಅಸಮಾಧಾನಗಳ ನಡುವೆ ಪಕ್ಷವನ್ನು ಜನರ ಮುಂದೆ ಒಯ್ಯಲಾಗದು. ಹಾಗಾಗಿ ಈಗಲೇ ಈ ವಿಷಯಕ್ಕೆ ತೆರೆ ಎಳೆಯಬೇಕಿದೆ. ಆ ಹಿನ್ನೆಲೆಯಲ್ಲಿ ನಿಮ್ಮ ರಾಜೀನಾಮೆ ಪಡೆಯುವುದು ಅನಿವಾರ್ಯ. ಆದರೆ, ಹಿರಿಯ ಜನನಾಯಕರಾದ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು, ಸೂಕ್ತ ಸ್ಥಾನಮಾನ ನೀಡಲಾಗುವುದು. ಹಾಗಾಗಿ ಈ ವಿಷಯದಲ್ಲಿ ಇನ್ನಷ್ಟು ಹಗ್ಗಜಗ್ಗಾಟಕ್ಕೆ ಅವಕಾಶ ನೀಡದೆ ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದರು.

ಆಗ ಯಡಿಯೂರಪ್ಪ, ತಮ್ಮ ಮಕ್ಕಳಿಗೆ ಪಕ್ಷದಲ್ಲಿ ಮತ್ತು ರಾಜ್ಯ ರಾಜಕಾರಣದಲ್ಲಿ ಉತ್ತಮ ಸ್ಥಾನಮಾನಗಳನ್ನು ನೀಡಬೇಕು ಮತ್ತು ಮುಂದಿನ ಚುನಾವಣೆಗೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ತಮಗೆ ಕೊಡಬೇಕು ಎಂದು ಯಡಿಯೂರಪ್ಪ ಹೇಳಿದರು. ಜೊತೆಗೆ ಕನಿಷ್ಟ ಒಂದು ತಿಂಗಳ ಕಾಲಾವಕಾಶ ಕೊಡಿ. ಆಗಸ್ಟ್ ಮೊದಲ ವಾರ ಮತ್ತೊಮ್ಮೆ ದೆಹಲಿಗೆ ಬರುತ್ತೇನೆ. ಜು.26ಕ್ಕೆ ತಮ್ಮ ಸರ್ಕಾರ ಎರಡು ವರ್ಷ ಪೂರೈಸಲಿದೆ. ಆ ವರೆಗೆ ಕಾಲಾವಕಾಶ ಕೊಡಿ ಎಂದು ಕೇಳಿದ್ದು, ಅದಕ್ಕೆ ಶಾ ಸಮ್ಮತಿಸಿದ್ದಾರೆ ಎಂಬುದು ದೆಹಲಿ ಮೂಲಗಳ ಮಾಹಿತಿ.

ಆದರೆ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಈ ವರದಿಗಳನ್ನು ತಳ್ಳಿಹಾಕಿದ್ದು, ಇನ್ನು ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಅವರ ನೇತೃತ್ವದಲ್ಲೇ ಪಕ್ಷ ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂತಹ ವರದಿಗಳ ನಡುವೆಯೇ, ಇತ್ತೀಚೆಗೆ ಮೋದಿಯವರ ಸಂಪುಟದಿಂದ ಹೊರಬಿದ್ದಿರುವ ಡಿ ವಿ ಸದಾನಂದ ಗೌಡರು ಯಡಿಯೂರಪ್ಪ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ. ಅವರನ್ನು ಕೇಂದ್ರ ಸಂಪುಟದಿಂದ ಕೈಬಿಡುವ ಹಿಂದೆ ನಾಯಕತ್ವ ಬದಲಾವಣೆಯ ಲೆಕ್ಕಾಚಾರಗಳೇ ಇದ್ದವು. ಈಗಾಗಲೇ ಒಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅನುಭವ ಇರುವ ಸದಾನಂದ ಗೌಡರಿಗೆ ನಾಯಕತ್ವ ನೀಡುವುದರಿಂದ ಏಕಕಾಲಕ್ಕೆ ಪಕ್ಷದಲ್ಲಿ ಯಡಿಯೂರಪ್ಪ ಹೊರತುಪಡಿಸಿದರೆ ಸಿಎಂ ಸ್ಥಾನಕ್ಕೆ ಸೂಕ್ತ ನಾಯಕರ ಕೊರತೆ ಇದೆ ಎಂಬ ಸಮಸ್ಯೆಯನ್ನೂ ನೀಗಬಹುದು ಮತ್ತು ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯದ ವಿಶ್ವಾಸವನ್ನೂ ಗಟ್ಟಿಗೊಳಿಸಿಕೊಳ್ಳಬಹುದು ಎಂಬುದು ವರಿಷ್ಠರ ಲೆಕ್ಕಾಚಾರ. ಆ ಹಿನ್ನೆಲೆಯಲ್ಲೇ ಕಳೆದ ವಾರ ಉತ್ತರ ಕರ್ನಾಟಕದ ಭಾಗದ ಪ್ರಭಾವಿ ಲಿಂಗಾಯತ ಮುಖಂಡ ಮುರುಗೇಶ್ ನಿರಾಣಿ ಅವರನ್ನು ಕರೆಸಿಕೊಂಡು ವರಿಷ್ಠರು ಮಾತುಕತೆ ನಡೆಸಿದ್ದರು ಎಂಬ ಮಾತುಗಳೂ ಚರ್ಚೆಯಾಗುತ್ತಿವೆ.

ಅನಾರೋಗ್ಯದ ಕಾರಣವೊಡ್ಡಿ‌ ರಾಜಿನಾಮೆಗೆ ಮುಂದಾದ ಸಿಎಂ ಬಿ.ಎಸ್.ಯಡಿಯೂರಪ್ಪ!

ಈ ನಡುವೆ, ಯಡಿಯೂರಪ್ಪ ದೆಹಲಿ ಭೇಟಿಯ ಬೆನ್ನಲ್ಲೇ ಸಚಿವ ಆರ್ ಅಶೋಕ್ ಅವರ ಕಚೇರಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಯಡಿಯೂರಪ್ಪ ವಿರೋಧಿ ಬಣದ ಪ್ರಮುಖ ಅರವಿಂದ್ ಬೆಲ್ಲದ್ ನಡುವೆ ನಡೆದ ರಹಸ್ಯ ಮಾತುಕತೆ ಕೂಡ ನಾಯಕತ್ವ ಬದಲಾವಣೆಯ ಹಿನ್ನೆಲೆಯಲ್ಲೇ ನಡೆಯಿತು. ವರಿಷ್ಠರ ಸೂಚನೆಯ ಮೇರೆಗೇ ಈ ಮಾತುಕತೆ ನಡೆದಿದ್ದು, ಒಂದು ವೇಳೆ ಯಡಿಯೂರಪ್ಪ ರಾಜೀನಾಮೆ ನೀಡಲು ಒಪ್ಪಿಕೊಂಡಲ್ಲಿ, ಪರ್ಯಾಯ ನಾಯಕರಾಗಿ ಸದಾನಂದ ಗೌಡ ಮತ್ತು ಮುರುಗೇಶ್ ನಿರಾಣಿ ಸೇರಿದಂತೆ ಯಾರನ್ನು ನಿಮ್ಮ ಬಣ ಒಪ್ಪಿಕೊಳ್ಳಲಿದೆ ಎಂಬ ಬಗ್ಗೆ ಆ ಮಾತುಕತೆಯಲ್ಲಿ ಚರ್ಚೆಯಾಗಿದೆ. ಸ್ಥಳೀಯ ಮಟ್ಟದಲ್ಲಿ ಪರ್ಯಾಯ ನಾಯಕರ ಬಗ್ಗೆ ಸಹಮತಕ್ಕೆ ಬರುವುದು ಮುಖ್ಯ. ಆ ಬಳಿಕವಷ್ಟೇ ಯಡಿಯೂರಪ್ಪ ರಾಜೀನಾಮೆಯ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುವುದು ಸೂಕ್ತ ಎಂಬ ಹಿನ್ನೆಲೆಯಲ್ಲಿ ವರಿಷ್ಠರೇ ಈ ಮಾತುಕತೆಗೆ ಸೂಚಿಸಿದ್ದರು. ಅವರ ಸೂಚನೆಯ ಮೇರೆಗೇ ಈ ಮಾತುಕತೆ ನಡೆಯಿತು. ಆ ಬಳಿಕವೇ ಮಾರನೇ ದಿನ ಅಮಿತ್ ಶಾ ಯಡಿಯೂರಪ್ಪ ಅವರೊಂದಿಗೆ ನಾಯಕತ್ವ ಬದಲಾವಣೆಯ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗುತ್ತಿದೆ.

ಆ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕತ್ವ ಬದಲಾವಣೆಯ ಬಹುದಿನಗಳ ಹಗ್ಗಜಗ್ಗಾಟಕ್ಕೆ ಬಿಜೆಪಿ ಹೈಕಮಾಂಡ್ ಕೊನೆಗೂ ದಿಟ್ಟ ಹೆಜ್ಜೆ ಇಟ್ಟಿದೆ ಎಂಬ ಸೂಚನೆಗಳು ಮುಖ್ಯಮಂತ್ರಿಗಳ ದೆಹಲಿ ಭೇಟಿಯ ಬಳಿಕ ಹೊರಬರುತ್ತಿವೆ. ಅದೇ ಹೊತ್ತಿಗೆ ರಾಜ್ಯದಲ್ಲೂ ಬಿರುಸಿನ ರಹಸ್ಯ ಮಾತುಕತೆಗಳು, ಸೂಚ್ಯ ಹೇಳಿಕೆಗಳು ಹೊರಬೀಳುತ್ತಿವೆ ಎಂಬುದು ಈ ಕುರಿತ ವದಂತಿಗಳು, ವರದಿಗಳು ಕೇವಲ ಅಂತೆಕಂತೆಗಳಲ್ಲ ಎಂಬುದನ್ನಂತೂ ಹೇಳುತ್ತಿವೆ!


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ