ಬೆಂಗಳೂರು: ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿಗೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಜುಲೈ 26 ಕ್ಕೆ ಶಾಸಕಾಂಗ ಸಭೆ ಕರೆದಿರುವುದಾಗಿ ಈ ಹಿಂದೆ ತಿಳಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ತಮ್ಮ ಯೋಜನೆಯನ್ನು ದಿಢೀರ್ ಬದಲಿಸಿದ್ದಾರೆ.
ಜುಲೈ 26ಕ್ಕೆ ಬಿ ಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ವರ್ಷವಾಗುತ್ತದೆ. ಸದ್ಯ ಶಾಸಕಾಂಗ ಸಭೆಯನ್ನು ರದ್ದು ಮಾಡಿರುವ ಸಿಎಂ ಬಿಎಸ್ ವೈ ಜುಲೈ 25 ರಂದು ಸಂಜೆ ಪಕ್ಷದ ಶಾಸಕರಿಗೆ ಔತಣಕೂಟ ಆಯೋಜನೆ ಮಾಡಿದ್ದಾರೆ. ಮರುದಿನ ಅಂದರೆ ಜುಲೈ 26 ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸರ್ಕಾರ ಎರಡು ವರ್ಷ ಪೂರೈಸಿದ್ದಕ್ಕಾಗಿ ಅಭಿನಂದನೆ ಹಾಗೂ ಸಾಧನಾ ಸಮಾವೇಶ ಏರ್ಪಡಿಸಿದ್ದಾರೆ.
ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಎಲ್ಲರ ಭೇಟಿಯ ಬಳಿಕ, ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ಮಾಡಿಲ್ಲ. ಉಳಿದ ಅವಧಿಗೂ ನಾನೇ ಮುಖ್ಯಮಂತ್ರಿಯಾಗುತ್ತೇನೆ. ಈ ವೇಳಳೆ ಹೈಕಮಾಂಡ್ ಬಯಸಿದರೆ ಅವರ ಮಾತು ಕೇಳಬೇಕು ಎಂದಿದ್ದಾರೆ.
ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತದೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಪಡಿಸಬೇಕು. ನಾನು ಸಂಘಟನೆ ಪ್ರಾಮಾಣಿಕವಾಗಿ ಮಾಡುತ್ತೇನೆ, 2023ಕ್ಕೆ ಮತ್ತೆ ಅಧಿಕಾರಕ್ಕೆ ತರಬೇಕಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಆದರೆ ದೆಹಲಿಯಲ್ಲಿ ಸಿಎಂ ಗೆ ಮುಂದೆನೆರಡು ವರ್ಷಗಳ ಕಾಲ ಅಭಯ ಸಿಕ್ಕಿಲ್ಲ ಎನ್ನುತ್ತದೆ ಮೂಲಗಳು.