ರಾಮನಗರ: ಬಹು ನಿರೀಕ್ಷಿತ ಮೇಕೆದಾಟು ಅಣೆಕಟ್ಟೆ ನಿರ್ಮಾಣದಿಂದ ಸಾವಿರಾರು ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶ ಮುಳುಗಡೆ ಆಗಲಿದ್ದು, ಅದಕ್ಕೆ ಪ್ರತಿಯಾಗಿ ಅಷ್ಟೇ ಪ್ರಮಾಣದ ಅರಣ್ಯ ಬೆಳೆಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಸದ್ಯದಲ್ಲೇ ರಾಮನಗರ ಜಿಲ್ಲಾಡಳಿತದಿಂದ ಅರಣ್ಯ ಇಲಾಖೆಗೆ ಭೂಮಿ ಹಸ್ತಾಂತರವೂ ಆಗಲಿದೆ.
ಜಿಲ್ಲೆಯಲ್ಲಿರುವ ಸಂಗಮ-ಮೇಕೆದಾಟು ಪ್ರದೇಶದಲ್ಲಿ ಕಾವೇರಿ ನದಿಗೆ ₹ 9 ಸಾವಿರ ಕೋಟಿ ವೆಚ್ಚದಲ್ಲಿ ಅಣೆಕಟ್ಟೆ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಜಲಾಶಯಕ್ಕಾಗಿ ಸುಮಾರು 4,996 ಹೆಕ್ಟೇರ್ ಪ್ರದೇಶವು ಮುಳುಗಡೆ ಆಗಲಿದ್ದು, ಇದರಲ್ಲಿ 4716 ಹೆಕ್ಟೇರ್ ಅರಣ್ಯ ಪ್ರದೇಶವೇ ಆಗಿದೆ. ಅದರಲ್ಲಿಯೂ 2,800 ಹೆಕ್ಟೇರ್‌ನಷ್ಟು ಪ್ರದೇಶವು ಕಾವೇರಿ ವನ್ಯಧಾಮಕ್ಕೆ ಸೇರಿದೆ.
ಮುಳುಗಡೆ ಆಗಲಿರುವ ಶೇ 95ಕ್ಕೂ ಹೆಚ್ಚು ಜಮೀನು ಅರಣ್ಯವೇ ಆಗಿರುವ ಕಾರಣ ಯೋಜನೆಗೆ ಅನುಮತಿ ದೊರೆಯುವುದು ವಿಳಂಬ ಆಗುತ್ತಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಸುಮಾರು 2,500 ಹೆಕ್ಟೇರ್, ಮಂಡ್ಯ ಜಿಲ್ಲೆಯ ಮುತ್ತತ್ತಿ ಅರಣ್ಯ ಪ್ರದೇಶ ಹಾಗೂ ಚಾಮರಾಜನಗರದ ಹನೂರು ಅರಣ್ಯ ವಲಯ ಸೇರಿ 2,200 ಸಾವಿರ ಹೆಕ್ಟೇರ್‌ನಷ್ಟು ಕಾಡು ಮುಳುಗಡೆ ಆಗಲಿದೆ.
ಇದಕ್ಕೆ ಪ್ರತಿಯಾಗಿ ರಾಮನಗರ ಜಿಲ್ಲೆಯಲ್ಲಿ 2,500 ಹೆಕ್ಟೇರ್‌ನಷ್ಟು ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತವು ಅರಣ್ಯ ಇಲಾಖೆಗೆ ಹಸ್ತಾಂತರಿಸಲಿದೆ. ಈಗಾಗಲೇ ಇದಕ್ಕಾಗಿ 30 ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದ್ದು, ಇನ್ನೊಂದು ವಾರದಲ್ಲಿ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಕೆ. ರಾಕೇಶ್‌ಕುಮಾರ್ ತಿಳಿಸಿದರು.
ಯೋಜನೆಯ ವ್ಯಾಪ್ತಿಗೆ ಒಳಪಡುವ ಇತರ ಜಿಲ್ಲೆಗಳಾದ ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯಲ್ಲೂ ಇದೇ ಮಾದರಿಯಲ್ಲಿ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ಮುಳುಗಡೆ ಆಗುವಷ್ಟೇ ವಿಸ್ತೀರ್ಣದ ಜಮೀನನ್ನು ಪ್ರತಿಯಾಗಿ ಬಿಟ್ಟುಕೊಡಬೇಕಿದೆ. ಹೀಗೆ ಪಡೆದುಕೊಂಡ ಭೂಮಿಯಲ್ಲಿ ಕಾಡು ಬೆಳೆಸುವ ಯೋಜನೆಯನ್ನು ಇಲಾಖೆ ಮಾಡಲಿದೆ. ಮಂಡ್ಯದಲ್ಲಿ 2 ಸಾವಿರ ಹಾಗೂ ಚಾಮರಾಜನಗರದಲ್ಲಿ 1 ಸಾವಿರ ಹೆಕ್ಟೇರ್ ಭೂಮಿ ಅರಣ್ಯ ಇಲಾಖೆಗೆ ಸಿಗುವ ನಿರೀಕ್ಷೆ ಇದೆ.
ಜಿಲ್ಲಾಡಳಿತವು ನೀಡುವ ಜಮೀನು ಡೀಮ್ಡ್ ಫಾರೆಸ್ಟ್ ಆಗಿದ್ದಲ್ಲಿ 1:2 ಅನುಪಾತದಲ್ಲಿ ಹಾಗೂ ಕಾಡಂಚಿನ ಇಲ್ಲವೇ ಕಂದಾಯ ಭೂಮಿ ಆಗಿದ್ದಲ್ಲಿ 1:1 ಅನುಪಾತದಲ್ಲಿ ಜಮೀನು ಬಿಟ್ಟುಕೊಡಬೇಕಿದೆ.